ತೆರಪಿನ ಶಿಕ್ಷಣ -
ಕಂಟಿನ್ಯೂಯಿಂಗ್ ಎಜುಕೇಷನ್ ಎನ್ನುವ ಇಂಗ್ಲಿಷ್ ಮಾತಿಗೆ ಸಮನಾದ ಕನ್ನಡ ಪದವಿದು. ಈ ಶಿಕ್ಷಣ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಗಿಂತ ಭಿನ್ನವಾದುದು. ಪಾಂಕ್ತವಾಗಿ ಶಾಲಾಕಾಲೇಜುಗಳನ್ನು ಸೇರಿ, ನಿರ್ದಿಷ್ಟ ಕಾಲ, ಅವಧಿ ಮತ್ತು ಸ್ಥಳಗಳಲ್ಲಿ, ಶಿಕ್ಷಕರ ನೇರ ಮಾರ್ಗದರ್ಶನದಲ್ಲಿ ವ್ಯಾಸಂಗ ನಡೆಸುವುದು ಸಾಂಪ್ರದಾಯಿಕ ಶಿಕ್ಷಣದ ಲಕ್ಷಣ. ತೆರಪಿನ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿ ತಾನಿರುವೆಡೆಯಲ್ಲೇ ತಾನು ಬಯಸಿದ ವ್ಯಾಸಂಗ ಮಾಡುವ ಅನುಕೂಲ ಲಭ್ಯವಿರುತ್ತದೆ. ಅಂಚೆ ಮೂಲಕ ವಿದ್ಯಾರ್ಥಿ ಬೋಧನ ಸಾಮಗ್ರಿಗಳನ್ನು ಪಡೆದು ವ್ಯಾಸಂಗ ಮಾಡುತ್ತಾನೆ. ಆದರೂ ಸಾಂಪ್ರದಾಯಿಕ ಹಾಗೂ ತೆರಪಿನ ಶಿಕ್ಷಣದ ವಿದ್ಯಾರ್ಥಿ ಪಡೆಯುವ ಶಿಕ್ಷಣ ಮತ್ತು ಪದವಿಗಳು ಒಂದೇ ಆಗಿರುತ್ತವೆ. ಒಬ್ಬನಿಗೆ ಕಾಲ, ದೇಶ, ಸ್ಥಳ, ಹಾಜರಿಗಳು ಕಡ್ಡಾಯವಾಗಿದ್ದರೆ ಮತ್ತೊಬ್ಬನಿಗೆ ಇಲ್ಲ. ತೆರಪಿನ ಶಿಕ್ಷಣವನ್ನು ಗೃಹಶಿಕ್ಷಣ, ಸ್ವಯಂಶಿಕ್ಷಣ, ವಯಸ್ಕ ಶಿಕ್ಷಣ, ಪತ್ರಾಚಾರ ಶಿಕ್ಷಣ, ಅಸಾಂಪ್ರದಾಯಿಕ ಶಿಕ್ಷಣ, ಒಪ್ಪೊತ್ತಿನ ಶಿಕ್ಷಣ, ಅಂಚೆ ಶಿಕ್ಷಣ ಮುಂತಾದ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಅಂಚೆ ಶಿಕ್ಷಣವೆಂಬ ಹೆಸರು ಇಂದು ಹೆಚ್ಚು ಪ್ರಚಾರದಲ್ಲಿದೆ.

	ಕಡ್ಡಾಯ ಶಿಕ್ಷಣದಿಂದಾಗಲಿ, ಉಚಿತ ಶಿಕ್ಷಣದಿಂದಾಗಲಿ ಅಭಿವೃದ್ಧಿಗೊಳ್ಳುತ್ತಿರುವ ರಾಷ್ಟ್ರಗಳಲ್ಲಿ ನಿರ್ದಿಷ್ಟ ಗುರಿ ಮುಟ್ಟಲಾಗಿಲ್ಲ. ಸ್ವಾತಂತ್ರ್ಯಾನಂತರ ಭಾರತದಲ್ಲಿ ಸಹಸ್ರಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದರೂ ಕಳೆದ 28 ವರ್ಷಗಳಲ್ಲಿ ನಾವು ಸಾಧಿಸಿರುವ ವಿದ್ಯಾಭ್ಯಾಸದ ಉನ್ನತಿ ಸುಮಾರು ನೂರರಲ್ಲಿ 7 ಭಾಗದಷ್ಟು ಮಾತ್ರ. ಸ್ಫೋಟಿಸುತ್ತಿರುವ ಜನಸಂಖ್ಯೆಯ ಹೆಚ್ಚಳದಲ್ಲಿ ಈ ಹೆಚ್ಚುವರಿ ಪ್ರತಿವರ್ಷವೂ ಕುಸಿಯುತ್ತಿದೆ. ಸ್ವಾತಂತ್ರ್ಯಾಪೂರ್ವದಲ್ಲಿ ಕೇವಲ1,50,000 ಸೆಕೆಂಡರಿ ಶಾಲೆಗಳೂ 1000 ಪ್ರೌಢ ಶಾಲೆಗಳೂ ಇದ್ದವು. ಇಂದು ಅವು ಕ್ರಮವಾಗಿ 5,00,000 ಮತ್ತು 35,000 ಆಗಿವೆ. ಅದರಂತೆ ವಿದ್ಯಾರ್ಥಿ ಸಂಖ್ಯೆ 1948 ರಲ್ಲಿ 1.29 ಕೋಟಿ ಇದ್ದದ್ದು ಇಂದು 8.36 ಕೋಟಿಯಾಗಿದೆ. 1978 - 79 ರ ಹೊತ್ತಿಗೆ ಈ ಸಂಖ್ಯೆ 14.21 ಕೋಟಿ ಮುಟ್ಟುವ ನಿರೀಕ್ಷೆ ಇದೆ. ಜೀವಿತದ ಮಾರ್ಗವಾಗಿ ಪ್ರಜಾಪ್ರಭುತ್ವವನ್ನು ಭಾರತ ಆಯ್ದುಕೊಂಡಿದೆ. ಪ್ರಜಾಪ್ರಭುತ್ವದ ಸಂರಕ್ಷಣೆ ಮತ್ತು ಪುರೋಭಿವೃದ್ಧಿಗಾಗಿ ಪ್ರಜೆಗಳು ವಿದ್ಯಾವಂತರಾಗಬೇಕಾದುದು ಅನಿವಾರ್ಯ. ಆಧುನಿಕ ವಿಶ್ವ ಅತ್ಯಂತ ತೀವ್ರಗತಿಯಲ್ಲಿ ಬದಲಾವಣೆಗೊಳ್ಳುತ್ತಿದೆ ಜ್ಞಾನದ ಬೆಳವಣಿಗೆ ಎಷ್ಟು ತೀವ್ರಗತಿಯಲ್ಲಿದೆ ಎಂದರೆ ಸ್ನಾತಕ ತನ್ನ ಪದವಿ ಪಡೆಯುವುದರೊಳಗಾಗಿ ಆತ ಪಡೆದ ಜ್ಞಾನ ತೀರ ಹಳತಾಗಿ ಬಿಟ್ಟಿರುತ್ತದೆ. ವೈದ್ಯ ವಿದ್ಯಾರ್ಥಿ ತನ್ನ ಶಿಕ್ಷಣದ ಪ್ರಥಮ ವರ್ಷದಲ್ಲಿ ತಿಳಿದುಕೊಂಡಿದ್ದ ರೋಗ, ರೋಗಲಕ್ಷಣ ಮತ್ತು ಔಷಧಿಗಳು ವ್ಯಾಸಂಗ ಮುಗಿಸಿ ಹೊರಬರುವಷ್ಟರಲ್ಲಿ ಪೂರ್ಣ ಬದಲಾವಣೆಗೊಂಡಿರುತ್ತದೆ. ಮಹಾಸಂಶೋಧನ ಪತ್ರವೊಂದು ಪ್ರಕಟವಾಗುವುದರೊಳಗಾಗಿ ಹಳತಾಗಿರುತ್ತದೆ. ಜಟಿಲವಾದ ಸೈನಿಕ ಆಯುಧವೊಂದು ಕಾರ್ಯಾಚರಣೆಗೆ ಬರುವ ದಿನವೇ ಅಕಾಲಿಕವಾಗಿರುತ್ತದೆ. ಇಷ್ಟು ತ್ವರಿತ ಗತಿಯಲ್ಲಿ ಬದಲಾಗುತ್ತಿರುವ ಜ್ಞಾನವನ್ನು ಸಾಂಪ್ರದಾಯಿಕ ಶಾಲಾಕಾಲೇಜುಗಳು ಅಷ್ಟೇ ತ್ವರಿತಗತಿಯಲ್ಲಿ ನೀಡಲಾರವು.

	ಆಧುನಿಕ ವಿಜ್ಞಾನ ಮಾನವನ ಆಯುಃಪ್ರಮಾಣವನ್ನು ದೀರ್ಘಗೊಳಿಸಿದೆ. ಯಾಂತ್ರೀಕೃತ ಯುಗ ವಿರಾಮ ಕಾಲವನ್ನು ಹೆಚ್ಚಿಸಿದೆ. ಪದವೀಧರ ತಾನು ಪಡೆದ ಶಿಕ್ಷಣವನ್ನು ನಿರಂತರವೂ ಪುನರ್ನವೀಕರಿಸಬೇಕಾಗುತ್ತದೆ. ಯಂತ್ರಜ್ಞ, ತಂತ್ರಜ್ಞ, ವೈದ್ಯ, ರೈತ, ಕಾರ್ಮಿಕ, ಅಧ್ಯಾಪಕ, ವಿದ್ಯಾರ್ಥಿ ದೈನಂದಿನ ಜ್ಞಾನದಿಂದ ದೂರವಿರುವುದು ಸಾಧ್ಯವಿಲ್ಲ. ನಿಯತಕಾಲಿಕ ಶಾಲಾಕಾಲೇಜುಗಳು ಈ ಎಲ್ಲರ ಬಯಕೆಯನ್ನೂ ತ್ವರಿತ ಗತಿಯಲ್ಲಿ ಈಡೇರಿಸುವುದು ಸಾಧ್ಯವಿಲ್ಲ. ತೆರಪಿನ ಶಿಕ್ಷಣ ಈ ಕೆಲಸ ಮಾಡಲು ಸಮರ್ಥವಾಗಿದೆ. ಇದರಲ್ಲಿ ಪ್ರಾಥಮಿಕದಿಂದ ಸ್ನಾತಕೋತ್ತರಮಟ್ಟದವರೆಗೆ ಶಿಕ್ಷಣಾವಕಾಶವಿದೆ. ವೃತ್ತಿಪರ, ಉದ್ಯೋಗಶೀಲ ವ್ಯಕ್ತಿ ತನ್ನ ಕೆಲಸ ಮುಂದುವರಿಸುತ್ತಲೇ ತನ್ನ ವೃತ್ತಿ ಅಥವಾ ಉದ್ಯೋಗಕ್ಕೆ ಅಗತ್ಯವಿರುವ ಹೆಚ್ಚಿನ ಜ್ಞಾನವನ್ನು ತೆರಪು ಶಿಕ್ಷಣದ ಮೂಲಕ ವ್ಯಾಸಂಗ ಮಾಡಬಹುದಾಗಿದೆ. ತನ್ನ ವಿರಾಮ ಕಾಲವನ್ನು ವ್ಯರ್ಥ ಮಾಡದೆ 1 ತನ್ನ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಲು ಇಲ್ಲಿ ಅವಕಾಶವಿದೆ. ತೆರಪಿನ ಶಿಕ್ಷಣದ ಮೂಲ ಗುರಿ ವ್ಯಕ್ತಿ ತಾನು ಅರ್ಹತೆ ಪಡೆದಿರುವ ವೃತ್ತಿಯಲ್ಲಿ ಮುಂದುವರಿಯಲು ಅಗತ್ಯವಾದ ಜ್ಞಾನವನ್ನು ಉಳಿಸಿಕೊಂಡು, ಅಗತ್ಯವಾದಾಗಲೆಲ್ಲ ಹೆಚ್ಚಿಸಿಕೊಳ್ಳುತ್ತ ಹೋಗಲು ಅವಕಾಶ ಮಾಡಿಕೊಡುವುದು. ಉನ್ನತ ಜ್ಞಾನ, ವಾಸ್ತವಿಕ ಪ್ರಜ್ಞೆ ಸಮಾಜದ ಪ್ರತಿ ಪ್ರಜೆಗೂ ಮುಕ್ತವಾಗಿ ದೊರೆಯಬೇಕು. ಯಾವ ಅಡೆತಡೆಗಳೂ ನೀತಿನಿರ್ಬಂಧಗಳೂ ಇರಬಾರದು. ಈ ಕೆಲಸ ಮಾಡುವುದೇ ತೆರಪಿನ ಶಿಕ್ಷಣದ ಉದ್ದೇಶ.

	ವಯಸ್ಸಿನ, ಕಾಲದ ಕಟ್ಟುಪಾಡಿಲ್ಲದೆ ಪ್ರಾಥಮಿಕ, ಪದವಿ, ಪದವಿಯೋತ್ತರ ಹಾಗೂ ಸಾಕ್ಷರತಾ ಕಾರ್ಯಕ್ರಮಗಳನ್ನು ತೆರಪಿನ ಶಿಕ್ಷಣ ನಡೆಸುತ್ತದೆ. ಸಮ್ಮೇಳನಗಳು, ಅಲ್ಪಾವಧಿ ಶಿಕ್ಷಣಗಳು, ವ್ಯಾಸಂಗ ಹಾಗೂ ವಿಚಾರಗೋಷ್ಠಿಗಳನ್ನು ನಡೆಸಿ, ಪತ್ರವ್ಯವಹಾರ, ನಿವಾಸಿ ಅನುಭವವೇ ಮುಂತಾದ ಅನೇಕ ಚಟುವಟಕೆಗಳನ್ನು ನಡೆಸಿ, ಪ್ರತಿ ರಾಷ್ಟ್ರದ ಬಹುಸಂಖ್ಯಾತ ವಯಸ್ಕನ ಜ್ಞಾನದ ಶೈಕ್ಷಣಿಕ ಸ್ತರವನ್ನು ಉದ್ದೀಪನಗೊಳಿಸಿ, ರಾಷ್ಟ್ರಾಭಿವೃದ್ಧಿಗಾಗಿ ರಾಷ್ಟ್ರೀಯನನ್ನು ಸಿದ್ಧಿಗೊಳಿಸುವುದೇ ತೆರಪಿನ ಶಿಕ್ಷಣದ ಪ್ರಥಮ ಕರ್ತವ್ಯ. ಇದು ಒಂದು ರೀತಿಯ ವಯಸ್ಕ ಶಿಕ್ಷಣವೆ. ಬಾಲ್ಯದ ಕೊರತೆಯನ್ನು ತುಂಬಲು ಶಿಕ್ಷಣದ ಅವಕಾಶ ದೊರಕಿಸಿಕೊಡುವುದು ವಯಸ್ಕ ಶಿಕ್ಷಣದ ತಳºದಿ. ವ್ಯಕ್ತಿಗೆ ಬೌದ್ಧಿಕ, ಆರ್ಥಿಕ ಹಾಗೂ ಸಾಂಸ್ಕøತಿಕ ತಿಳುವಳಿಕೆ ಪಡೆಯಲು ಅನುವು ಮಾಡಿಕೊಟ್ಟು, ರಾಷ್ಟ್ರದ ಅಭಿವೃದ್ಧಿಗೆ ಕಾರಣವಾಗುವ ಶೀಘ್ರಗತಿಯ ಶೈಕ್ಷಣಿಕ ಕ್ರಮ ಇದು. ವಿಶ್ವವಿದ್ಯಾಲಯಗಳಿಂದ ಪದವೀಧರನಾಗಿ ಹೊರಬರುತ್ತಿರುವ ತಂಡವೂ ತಮ್ಮ ಶಿಸ್ತು ಹಾಗೂ ಉತ್ತಮ ಮಟ್ಟಗಳನ್ನು ಸದಾ ಕಾಪಾಡಿಕೊಳ್ಳಲು ತೆರಪಿನ ಶಿಕ್ಷಣ ದಾರಿಮಾಡಿಕೊಡುತ್ತದೆ. ಇದು ಅವರ ವಿದ್ಯಾಭ್ಯಾಸಕ್ಕೆ ಗೆಲುವಿನ ಅಂತಿಮ ಮೆರುಗನ್ನು ನೀಡುತ್ತದೆ.

	ವಿಶ್ವವಿದ್ಯಾಲಯಗಳ ಪಾತ್ರ : ವಿಶ್ವವಿದ್ಯಾಲಯಗಳ ಸಾಂಪ್ರದಾಯಿಕ ಪಾತ್ರವೆಂದರೆ ಜ್ಞಾನದ ಸಂಶೋಧನೆ, ಪಾಲನೆ ಮತ್ತು ಪ್ರಸರಣೆ. ಈ ಜ್ಞಾನ ಶೈಕ್ಷಣಿಕವಾಗಿದ್ದು ಪ್ರಸಾರ ಸಮಾಜದ ಕೆಲವೊಂದು ವರ್ಗಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆರ್ಥಿಕವಾಗಿ ಸಬಲರಾಗಿರುವವರು ವಿಶ್ವವಿದ್ಯಾಲಯಗಳ ನಿವಾಸಿ ವಿದ್ಯಾರ್ಥಿಗಳಾಗಿ ಶಿಕ್ಷಣ ಪಡೆಯುವುದು ಸಾಧ್ಯ. ಸಕ್ರಮ ಹಾಜರಾತಿ ಇಲ್ಲಿ ಅನಿವಾರ್ಯ. ತೆರಪಿನ ಶಿಕ್ಷಣದ ಮೂಲಕ ಶ್ರೀಸಾಮಾನ್ಯನಿಗೆ ಉನ್ನತ ಶಿಕ್ಷಣವನ್ನು ದೊರಕಿಸುವ ಪ್ರಾಮಾಣಿಕ ಜವಾಬ್ದಾರಿಯನ್ನು ಇಂದಿನ ವಿಶ್ವವಿದ್ಯಾಲಯಗಳು ಹೊತ್ತಿಕೊಂಡು, ಇಂದು ಸಮಾಜಕ್ಕೂ ವಿಶ್ವವಿದ್ಯಾಲಯಗಳಿಗೂ ಮಧ್ಯೆ ಏರ್ಪಟ್ಟಿರುವ ಚೀನೀ ಗೋಡೆಯನ್ನು ಒಡೆಯಬೇಕಾಗಿದೆ ; ಬಿದ್ದಿರುವ ಬೃಹತ್ ಕಂದರವನ್ನು ಮುಚ್ಚಬೇಕಾಗಿದೆ. ವಿಶ್ವವಿದ್ಯಾಲಯಗಳು ಸಾಮಾನ್ಯನ ಮನೆಯ ಬಾಗಿಲಿಗೆ ಹೋಗಿ ಜ್ಞಾನ ಭಿಕ್ಷೆ ನೀಡುವುದು, ಜನತೆಯ ಸಮಸ್ಯೆಯನ್ನು ಗುರುತಿಸಿ ಪರಿಹಾರ ನೀಡುವುದು ಮೂಲ ಕರ್ತವ್ಯವಾಗಿದೆ.

	ಉಪಾಧ್ಯಾಯರು, ವಿಜ್ಞಾನಿಗಳು, ವೈದ್ಯರು, ಇಂಜಿನಿಯರುಗಳೇ ಮುಂತಾದವರ ತಿಳುವಳಿಕೆಯನ್ನು ಕಾಲೋಚಿತವಾಗಿ ಎತ್ತರಿಸುವಂಥ ಔದ್ಯೋಗಿಕ ಶಿಕ್ಷಣಕ್ರಮ ರೂಪಿಸುವುದು, ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಶೈಕ್ಷಣಿಕಕ್ಷೇತ್ರದಲ್ಲಿ ಪಾಲ್ಗೊಳ್ಳಲು ಜನತೆಗೆ ಮುಕ್ತ ಅವಕಾಶ ನೀಡುವುದು, ಸಾಕ್ಷರತಾ ಕಾರ್ಯಾಚರಣೆಯಲ್ಲಿ ತೊಡಗಿರುವ ಕಾರ್ಯಕರ್ತರಿಗೆ ಹಾಗೂ ಮೇಲ್ವಿಚಾರಕರಿಗೆ ತರಬೇತಿ ನೀಡುವುದು, ಸಾಕ್ಷರತಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಸುವುದು, ಸಂಶೋಧನಾ ಫಲಗಳನ್ನು ಸಂಬಂಧಿಸಿದವರಿಗೆ ತಲುಪಿಸುವುದು, ವಿಶ್ವವಿದ್ಯಾಲಯಗಳ ವ್ಯಾಪ್ತಿಯುಲ್ಲಿರುವ ಕಾಲೇಜುಗಳ ತಮ್ಮ ತೆರಪಿನ ಶಿಕ್ಷಣ ಸಂಸ್ಥೆಗಳ ಸಂಪರ್ಕ ಸಾಧಿಸಿ, ಪರಸ್ಪರರು ಸಮಾಜ ಶಿಕ್ಷಣಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುವಂತೆ ಮಾಡುವುದು ಇಂದಿನ ವಿಶ್ವವಿದ್ಯಾಲಯಗಳ ಆದ್ಯ ಕರ್ತವ್ಯವಾಗಿದೆ.
	ಶಿಕ್ಷಣದ ವ್ಯಾಪ್ತಿ : ಅಂಚೆ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರ, ವಿಶ್ವವಿದ್ಯಾಲಯಗಳು ಹಾಗೂ ಖಾಸಗಿ ಸಂಘಸಂಸ್ಥೆಗಳು ಸ್ಥಾಪಿಸಿ, ನಡೆಸುತ್ತಿವೆ. ತಾಂತ್ರಿಕ ಮತ್ತು ಕೈಗಾರಿಕಾ ಸ್ಥಾವರಗಳು, ವಾಣಿಜ್ಯ ಸಂಸ್ಥೆಗಳು ಈ ಪದ್ಧತಿಯನ್ನು ಲಾಭಕರವಾಗಿ ಉಪಯೋಗಿಸಿಕೊಳ್ಳುತ್ತಿವೆ. ಕೆಲಸಗಾರರಿಗೆ ಹೆಚ್ಚಿನ ತರಪೇತಿ, ಅರ್ಹತೆ, ಕುಶಲತೆಗಳನ್ನು ಹೆಚ್ಚಿಸುವುದು ಇಲ್ಲಿ ಮುಖ್ಯ. ಆರಂಭದಲ್ಲಿ ತೆರಪಿನ ಶಿಕ್ಷಣ ರಜಾದಿನಗಳನ್ನು ಅಥವಾ ವಿರಾಮ ಕಾಲವನ್ನು ಸದುಪಯೋಗಪಡಿಸಿಕೊಂಡು ಜನತೆಗೆ ಶಿಕ್ಷಣ ನೀಡಲು ಉದಿಸಿತು. ಇಂದು ಸಾಂಪ್ರದಾಯಿಕ ಸಾಮಾನ್ಯ ಶಿಕ್ಷಣ ನೀಡಲೂ ಔದ್ಯೋಗಿಕ, ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ನೀಡಲೂ ಅದನ್ನು ಬಳಸಿಕೊಳ್ಳಲಾಗುತ್ತಿದೆ. ಕುರುಡರು, ಕಿವುಡರು ಹೆಳವರೇ ಮುಂತಾದ ದೈಹಿಕ ಅಂಗವಿಕಲರೂ ಈ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

	ಗಣಕಶಾಸ್ತ್ರ, ಜಾಹಿರಾತು ಕಲೆ, ಲಲಿತ ಕಲೆ, ವನ್ಯಮೃಗಸಂರಕ್ಷಣೆ, ಮರಗೆಲಸ, ಪ್ರಾಣಿಶಾಸ್ತ್ರ, ವಿಮಾನಯಾನ ನಿರ್ವಹಣೆ, ಎಲೆಕ್ಟ್ರಾನಿಕ್ಸ್, ಯಂತ್ರ ರಿಪೇರಿ, ಇಂಜಿನಿಯರಿಂಗ್, ಅಂಕಿ ಅಂಶ ಸಂಗ್ರಹಣೆ, ಕಾನೂನು ಹೊಟೇಲ್ ಹಾಗೂ ಮೋಟೆಲ್ ಆಡಳಿತ, ವ್ಯಾಪಾರಿ ಕಲೆ ಮುಂತಾದ ವಿಷಯಗಳಲ್ಲಿ ಪ್ರಾರಂಭಿಕ ಅಭ್ಯರ್ಥಿಗಳ ಜೊತೆಗೆ ಅನುಭವಿ ವಯಸ್ಕರೂ ಶಿಕ್ಷಣ ಪಡೆಯುತ್ತಿದ್ದಾರೆ. ಇವುಗಳಲ್ಲೆಲ್ಲ ನಿಯತಕಾಲಿಕ ಶಾಲಾಕಾಲೇಜುಗಳಲ್ಲಿ ದೊರೆಯುವ ಸಾಮಾನ್ಯ ಶಿಕ್ಷಣವೇ ಇಲ್ಲಿಯೂ ಅತ್ಯಂತ ಜನಪ್ರಿಯ.

	ವಿದ್ಯಾರ್ಥಿಗಳು : ಇಲ್ಲಿ ವಯಸ್ಸಿನ ಇತಿಮಿತಿಗಳಿಲ್ಲ. ಆರು ವರ್ಷದ ಬಾಲಕರಂತೆಯೇ ಎಂಬತ್ತು ವರ್ಷದ ವೃದ್ಧರನ್ನೂ ಇಲ್ಲಿ ಕಾಣಬಹುದು. ಸರಾಸರಿ ಆಯುಃಪ್ರಮಾಣ ಪ್ರಿ - ಯೂನಿವರ್ಸಿಟಿ ತರಗತಿಗಳಲ್ಲಿ 15 ರಿಂದ 25, ಪದವಿ ಮತ್ತು ಸ್ನಾತಕೋತ್ತರ ತರಗತಿಗಳಲ್ಲಿ 25 ರಿಂದ 35. ಪದವಿಪೂರ್ವ ಮತ್ತು ಸ್ನಾತಕೋತ್ತರಗಳಲ್ಲಿ ತರಗತಿಗಳಲ್ಲಿ ವ್ಯಾಸಂಗ ಮಾಡುವವರಲ್ಲಿ ಬಹು ಮಂದಿ ಹಳ್ಳಿಗರು. ವೃತ್ತಿಪರ ತರಗತಿಗಳಲ್ಲಿ ಬಹುಸಂಖ್ಯಾತರು ಪಟ್ಟಣಿಗರು. ವಯಸ್ಸಿನಲ್ಲಿ ಹೇಗೋ ಹಾಗೆ ವಿಷಯದ ಆಯ್ಕೆಯಲ್ಲೂ ವೈವಿಧ್ಯ ಉಂಟು. ಬಾಲ್ಯದಲ್ಲಿ ನಾನಾ ಕಾರಣಗಳಿಂದ ಶಿಕ್ಷಣ ನಿಲ್ಲಿಸಿದವರು, ವಾಣಿಜ್ಯ, ಉದ್ಯೋಗ ಮತ್ತು ಕೈಗಾರಿಕಾ ಸಂಸ್ಥೆಗಳಲ್ಲಿ ಬಡ್ತಿ ಪಡೆಯಬಯಸುವವರು, ಉದ್ಯೋಗನಿರತ ಸ್ತ್ರೀಯರು ಮತ್ತು ಅಪಾರ ವಿರಾಮವಿರುವ ಗೃಹಿಣಿಯರು, ಕೈದಿಗಳು ಸೇನೆಯಿಂದ ನಿವೃತ್ತಿಗೊಂಡು ನಿವೃತ್ಯೋತ್ತರ ಹೊಸ ಉದ್ಯೋಗದಲ್ಲಿ ತೊಡಗಬಯಸುವವರು - ತೆರಪಿನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು. ಇವರು ನಿಯತಕಾಲಿಕ ಕಾಲೇಜುಗಳ ವಿದ್ಯಾರ್ಥಿಗಳಿಗಿಂತಲೂ ತಮ್ಮ ತಮ್ಮ ವಿಷಯಗಳ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಿಂತ ತೆರಪಿನ ಶಿಕ್ಷಣದ ವಿದ್ಯಾರ್ಥಿ ಕಲಿತುದುದನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲ, ಹೀಗೆ ಸಂಪಾದಿಸಿದ ಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲೂ ಪ್ರಯೋಗಕ್ಕಿಳಿಸಲೂ ಇವನಿಗೆ ಹೆಚ್ಚು ಅವಕಾಶವಿರುತ್ತದೆ. ನಿನ್ನೆ ಕಲಿತುದುದನ್ನು ಈತ ಇಂದು ಪ್ರಯೋಗಿಸಿ ನೋಡಬಲ್ಲ. ತಾನು ಬಯಸಿದ, ತನ್ನ ಉದ್ಯೋಗಕ್ಕೆ ಪೂರಕವಾದ ಶಿಕ್ಷಣವನ್ನೇ ಆಯ್ಕೆಮಾಡಿಕೊಂಡು ವ್ಯಾಸಂಗ ಮಾಡುವುದೇ ಇದಕ್ಕೆ ಮೂಲ ಕಾರಣ. ಅಲ್ಲದೆ ಈತ ವಯಸ್ಕ, ಇವನ ಬುದ್ಧಿ ಅರಳಿರುತ್ತದೆ. ಉಳಿದ ಶಾಲಾಕಾಲೇಜು ವಿದ್ಯಾರ್ಥಿಗೆ ಇಂಥ ಅವಕಾಶ ಅಪರೂಪ.

	ಬೋಧನ ಸಾಮಗ್ರಿ : ತೆರಪಿನ ಶಿಕ್ಷಣದ ವಿದ್ಯಾರ್ಥಿಗಾಗಿ ತಜ್ಞರಿಂದ ಪಠ್ಯ ವಿಷಯಗಳನ್ನು ಕುರಿತು ಸಿದ್ಧಪಾಠಗಳನ್ನು ಭರೆಸಲಾಗುತ್ತದೆ. ಒಂದು ವ್ಯಾಸಂಗ ವರ್ಷದಲ್ಲಿ ಮಾಮೂಲಿ ಕಾಲೇಜುಗಳಲ್ಲಿ ಒಂದು ವಿಷಯವನ್ನು 90 ಗಂಟೆಗಳ ಅವಧಿಯಲ್ಲಿ ಬೋಧಿಸಲಗತ್ಯವಾದರೆ, ಒಂದು ವಾರದಲ್ಲಿ 3 ಬೋಧನಾ ಗಂಟೆಯ ಉಪನ್ಯಾಸವನ್ನು ಒಂದು ಅಂಶವಾಗಿಸಿಕೊಂಡು ಇದಕ್ಕೆ ಒಂದು ಸಿದ್ಧಪಾಠದಂತೆ 30 ಪಾಠಗಳನ್ನು ಸಿದ್ಧಪಡಿಸಲಾಗುತ್ತದೆ. ಹೀಗೆ ಒಂದೊಂದು ವಿಷಯಕ್ಕೂ ಕನಿಷ್ಠ 30 ಸಿದ್ಧಪಾಠಗಳಿರುತ್ತವೆ. ವಿದ್ಯಾರ್ಥಿ ನೋಂದಣಿಯಾಗುತ್ತಿದ್ದಂತೆ ಆತ ವ್ಯಾಸಂಗ ಮಾಡಬೇಕಾಗಿರುವ ಒಂದೊಂದು ಪತ್ರಿಕೆಯಲ್ಲೂ ಮೂರು ಮೂರು ಸಿದ್ಧಪಾಠಗಳನ್ನು ರವಾನಿಸಲಾಗುತ್ತದೆ. ಜೊತೆಯಲ್ಲಿ ಆತ ವ್ಯಾಸಂಗ ಮಾಡಬೇಕಾದ ಪಠ್ಯಗ್ರಂಥಗಳ ಪಟ್ಟಿ, ಆಧಾರಗ್ರಂಥಗಳು, ಮಾಸಿಕ ಹಾಗೂ ವಾರ್ಷಿಕ ಸಂಚಿಕೆಗಳು, ನಿಯತಕಾಲಿಕೆಗಳು, ವ್ಯಾಸಂಗ ಮಾಡಬೇಕಾದ ಕ್ರಮ ಮುಂತಾದ ಮಾಹಿತಿಗಳನ್ನೊಳಗೊಂಡ ವಿವರಣಾತ್ಮಕ ಪತ್ರವೂ ಇರುತ್ತದೆ. ಮುಂದೆ ಸಿದ್ಧಪಾಠಗಳ ಜೊತೆಗೆ ವಿದ್ಯಾರ್ಥಿಗೆ ಲಭ್ಯವಾಗದಂಥ ಲೇಖನಗಳು, ಆಧಾರದ ಗ್ರಂಥಗಳಿಂದಾಗಿ ಪೂರಕ ವಿಷಯ, ಹೊಸ ಅಂಕಿ ಅಂಶ ಇತ್ಯಾದಿಗಳನ್ನು ಅವನ ಹೆಚ್ಚಿನ ಓದಿಗಾಗಿ ಒದಗಿಸಲಾಗುತ್ತದೆ. ಒಂದೊಂದು ವಿಷಯದಲ್ಲೂ ತಜ್ಞರಿಂದ ಉಪನ್ಯಾಸ ಮಾಡಿಸಿ ಧ್ವನಿಮುದ್ರಿಸಿಕೊಂಡು ಅದನ್ನು ಸಂಪರ್ಕ ಕಾರ್ಯಕ್ರಮದಲ್ಲಿ ಉಪಯೋಗಿಸಲಾಗುತ್ತದೆ. ಹಾಗೂ ವಿಶೇಷೋಪನ್ಯಾಸಗಳನ್ನು ಅಚ್ಚುಮಾಡಿಸಿಯೂ ವಿದ್ಯಾರ್ಥಿಗೆ ಹಂಚಲಾಗುತ್ತದೆ.

	ವಿದ್ಯಾರ್ಥಿಗೆ ಕಳುಹಿಸಿದ ಒಂದೊಂದು ಸಿದ್ಧಪಾಠದ ಕೊನೆಯಲ್ಲೂ ಆಯಾ ವಿಷಯವನ್ನು ಕುರಿತ ಪ್ರಶ್ನೆಪತ್ರಿಕೆಯಿರುತ್ತದೆ. ಇದನ್ನು ಅನುಶೀಲನಪತ್ರವೆನ್ನುತ್ತಾರೆ. ಈ ಪ್ರಶ್ನೆಗಳಿಗೆ ವಿದ್ಯಾರ್ಥಿ ಉತ್ತರ ಬರೆದು ಸಂಸ್ಥೆಗೆ ಹಿಂತಿರುಗಿಸಬೇಕು. ಹೀಗೆ ಬಂದ ಉತ್ತರಗಳನ್ನು ಪರಿಶೀಲಿಸಿ, ವಿದ್ಯಾರ್ಥಿ ಮಾಡಿರುವ ತಪ್ಪು - ಸರಿಗಳನ್ನು ಗುರುತಿಸಿ, ಮುಂದಿನ ವ್ಯಾಸಂಗದಲ್ಲಿ ಅನುಸರಿಸಬೇಕಾದ ಕ್ರಮವನ್ನು ಸೂಚಿಸಿ, ವಿದ್ಯಾರ್ಥಿ ಪಡೆದ ಅಂಕಗಳನ್ನು ದಾಖಲು ಮಾಡಿಕೊಂಡು ಮತ್ತೆ ಅವನ್ನು ವಿದ್ಯಾರ್ಥಿಗೇ ಹಿಂತಿರುಗಿಸಲಾಗುತ್ತದೆ. ಅನುಶೀಲನಪತ್ರಗಳಿಗೆ ಉತ್ತರಿಸುವುದು ಕಡ್ಡಾಯ. ವಿದ್ಯಾರ್ಥಿ - ಅಧ್ಯಾಪಕನ ನಡುವೆ ನಿರಂತರ ಸಂಪರ್ಕ ಉಳಿಯುವುದು ಇದರಿಂದಲೇ. ಇವುಗಳ ಪರಿಶೀಲನೆಯಿಂದ ವಿದ್ಯಾರ್ಥಿ ವ್ಯಾಸಂಗದಲ್ಲಿ ಹೇಗೆ ಮುಮದುವರಿಯುತ್ತಿದ್ದಾನೆಂದು ಗುರುತಿಸಿ ತಿದ್ದುವುದು ಸಾಧ್ಯ. ಭಾರತದ ಅಂಚೆ ಶಿಕ್ಷಣ ಸಂಸ್ಥೆಗಳು ಬಹುಮಟ್ಟಿಗೆ ಈ ಮಾರ್ಗವನ್ನು ಅನುಸರಿಸುತ್ತಿವೆ. ಪಾಶ್ಚಾತ್ಯ ಸಂಸ್ಥೆಗಳು ಅನುಶೀಲನ ಪತ್ರಗಳ ಮೌಲ್ಯಮಾಪನಕ್ಕಾಗಿ ಗಣಕ ಯಂತ್ರಗಳನ್ನು ಬಳಸುತ್ತಿವೆ. ತಮ್ಮ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಧ್ವನಿಮುದ್ರಿತ ಟೇಪು, ಧ್ವನಿಮುದ್ರಿಕೆಗಳು, ಶೈಕ್ಷಣಿಕ ಚಲನ ಚಿತ್ರಗಳು, ಆಕಾಶವಾಣಿ ಮತ್ತು ದೂರದರ್ಶಿನಿಗಳನ್ನು ಉಪಯೋಗಿಸಿಕೊಳ್ಳುತ್ತಿವೆ. ಆಕಾಶವಾಣಿಯ ಉಪಯೋಗ ಭಾರತದಲ್ಲಿ ಈಗ ಆರಂಭವಾಗಿದೆ.

	ಸಿದ್ಧಪಾಠಗಳು : ತಜ್ಞ ವಿದ್ವಾಂಸರ ಮಂಡಲಿಯೊಂದು ಒಂದೊಂದು ಪತ್ರಿಕೆಯ ಪಠ್ಯವಿಷಯವನ್ನು 30 ಅಥವಾ ಹೆಚ್ಚು ವಿಭಾಗಗಳಾಗಿ ವಿಂಗಡಿಸುತ್ತದೆ ; ಒಂದೊಂದು ಸಿದ್ಧಪಾಠದಲ್ಲೂ ಸೇರಬೇಕಾದ ವಿಷಯಗಳನ್ನು ನಿರ್ಧರಿಸುತ್ತದೆ. ಆಯಾ ವಿಷಯಗಳಲ್ಲಿ ಶಿಕ್ಷಣಾನುಭವ, ಪಾಂಡಿತ್ಯಗಳಿಸಿರುವ ವಿದ್ವಾಂಸರ ಪಟ್ಟಿ ತಯಾರಿಸುತ್ತದೆ. ಹೀಗೆ ಆಯ್ದ ತಜ್ಞರಿಂದ ಸಿದ್ಧಪಾಠಗಳನ್ನು ಬರೆಸಲಾಗುತ್ತದೆ. ಸಿದ್ಧಪಾಠ ರಚನಾ ಕಾಲದಲ್ಲಿ ತೆರಪಿನ ಶಕ್ಷಣದ ವಿದ್ಯಾರ್ಥಿಯ ಅರೆಕೊರೆ ಹಾಗೂ ಅಗತ್ಯಗಳನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತದೆ. ಪಠ್ಯಗ್ರಂಥಗಳನ್ನು ಆಧಾರವಾಗಿಟ್ಟುಕೊಂಡು ಸಿದ್ಧಪಾಠ ರಚಿಸುತ್ತಾರಾದರೂ ಅವು ಪಠ್ಯಗ್ರಂಥಗಳ ಪಡಿಯಚ್ಚಲ್ಲ. ಅವುಗಳ ಟಿಪ್ಪಣಿಯೂ ಅಲ್ಲ. ವಿದ್ಯಾರ್ಥಿ ಸುಲಭವಾಗಿ ವಿಷಯವನ್ನು ಗ್ರಹಿಸುವಂತೆ, ಸರಳ ಮಾತುಗಳ್ಲಿ ವಿಷಯದ ನಿರೂಪಣೆಯಿರುತ್ತದೆ. ಸಿದ್ಧಪಾಠಗಳನ್ನು ರಚಿಸಲು ಬಳಸಿಕೊಂಡ ಗ್ರಂಥಗಳನ್ನೂ ಪುಟನಿರ್ದೇಶನವನ್ನೂ ಆಧಾರಗ್ರಂಥಗಳ ಪಟ್ಟಿಯನ್ನೂ ಆಯಾ ಪಾಠದ ಕೊನೆಯಲ್ಲಿ ಕೊಟ್ಟಿರುತ್ತದೆ. ತಿಂಗಳಿಗೊಮ್ಮೆ ಅಥವಾ ಅಗತ್ಯವಾದರೆ ಎರಡು ವಾರಗಳಿಗೊಮ್ಮೆ ಸಿದ್ಧಪಾಠಗಳನ್ನು ವಿದ್ಯಾರ್ಥಿಗೆ ರವಾನಿಸಲಾಗುತ್ತದೆ. ಇವುಗಳ ಜೊತೆಗೆ ಸಂಸ್ಥೆಯ ಪುಸ್ತಕ ಭಂಡಾರದಿಂದ ವಿದ್ಯಾರ್ಥಿ ಗ್ರಂಥಗಳನ್ನು ಪಡೆಯಲವಕಾಶವಿರುತ್ತದೆ.

	ತೆರಪಿನ ಶಿಕ್ಷಣ ಸಂಸ್ಥೆಯ ಅಧ್ಯಾಪಕನ ಹೊಣೆಗಾರಿಕೆ ವಿಶೇಷ ತೆರನಾದುದು. ಇಲ್ಲಿ ಗುರು ದ್ರೋಣ, ಶಿಷ್ಯ ಏಕಲವ್ಯ, ವಿದ್ಯಾರ್ಥಿ ಬಹುದೂರದಲ್ಲಿರುತ್ತಾನೆ. ಹಳ್ಳಿಯ ಮೂಲೆಯೊಂದರಲ್ಲಿ ಕುಳಿತು ವ್ಯಾಸಂಗ ಮಾಡುವ ವಿದ್ಯಾರ್ಥಿಯ ಅಗತ್ಯವನ್ನು ವ್ಯಾಸಂಗ ಕಾಲದಲ್ಲಿ ಬರಬಹುದಾದ ಸಂದೇಹ, ಸಂಶಯ, ಅನುಮಾನಗಳನ್ನು ಊಹಿಸಿಕೊಂಡು, ಮೂಡಬಹುದಾದ ಪ್ರಶ್ನೆಗಳಿಗೆ ಸೂಕ್ತ ಪರಿಹಾರ ದೊರೆಯುವಂತೆ ತನ್ನ ಸಿದ್ಧಪಾಠಗಳನ್ನು ಉಪಾಧ್ಯಾಯ ರಚಿಸಬೇಕಾಗುತ್ತದೆ. ನಿವಾಸಿ ವಿದ್ಯಾರ್ಥಿಯಾದರೋ ಎದುರಲ್ಲಿರುತ್ತಾನೆ. ಅವನನ್ನು ಎದುರಲ್ಲಿ ಕುಳ್ಳಿರಿಸಿಕೊಂಡು ಉ¥ನ್ಯಾಸ ಮಾಡುವಾಗ ಅವನು ಅರ್ಥಮಾಡಿಕೊಳ್ಳುತ್ತಿದ್ದಾನೆಯೇ ಇಲ್ಲವೆ ಎಂಬುದನ್ನು ಅವನ ಮುಖ ನೋಡಿ ತಿಳಿದು, ಇಲ್ಲವಾದರೆ ಹತ್ತಾರು ನಿದರ್ಶನಗಳ ಮೂಲಕ ಸ್ಪಷ್ಟೀಕರಿಸುವುದು ಸಾಧ್ಯ. ಈ ಸೌಲಭ್ಯ ತೆರಪಿನ ಶಿಕ್ಷಣ ಸಂಸ್ಥೆಯ ಅಧ್ಯಾಪಕನಿಗಿರುವುದಿಲ್ಲ. ಈತ ರಚಿಸಿದ ಸಿದ್ಧಪಾಠಗಳನ್ನು ವಿದ್ಯಾರ್ಥಿ ಎಷ್ಟರಮಟ್ಟಿಗೆ ಅರ್ಥಮಾಡಿಕೊಂಡಿದ್ದಾನೆಂದು ತಿಳಿಯಲು ಆತ ಕಳುಹಿಸಿದ ಅನುಶೀಲನಪತ್ರ ಒಂದೇ ದಾರಿ. ಪ್ರತಿವರ್ಷವೂ ಸಿದ್ಧಪಾಠಗಳನ್ನು ಪುನರ್ನವೀಕರಿಸಬೇಕು. ಮೂರು ವರ್ಷಕ್ಕೊಮ್ಮೆ ಹೊಸದಾಗಿಯೇ ಅವನ್ನು ಸಿದ್ಧಪಡಿಸಬೇಕಾಗುತ್ತದೆ.

	ಪಾಶ್ಚಾತ್ಯ ದೇಶಗಳ ಸಾಂಪ್ರದಾಯಿಕ ಶಿಕ್ಷಣ ಸಂಸ್ಥೆಗಳು ತಮ್ಮ ತಮ್ಮ ಸಂಸ್ಥೆಯ ಹಿಂದುಳಿದ ವಿದ್ಯಾರ್ಥಿಯ ಕೊರತೆ ತುಂಬಿಕೊಡಲು ತೆರಪಿನ ಶಿಕ್ಷಣ ಮಾರ್ಗವನ್ನನುಸರಿಸಿ ಸಿದ್ಧಪಾಠಗಳನ್ನು ತಯಾರಿಸಿ ಹಂಚಿವ ವ್ಯವಸ್ಥೆ ಮಾಡಿವೆ. ತಮ್ಮ ಶಾಲಾಕಾಲೇಜುಗಳಲ್ಲಿ ಉತ್ತಮ ಗುಣಮಟ್ಟ ಪಡೆಯಲು ತೆರಪಿನ ಶಿಕ್ಷಣ ಸಂಸ್ಥೆಗಳನ್ನು ಸೇರುವ ಅವಕಾಶವೂ ಲಭ್ಯವಿದೆ. ತಾಂತ್ರಕ, ಔದ್ಯೋಗಿಕ, ವಾಣಿಜ್ಯ, ಸೈನಿಕ ಹಾಗೂ ಗಣಿ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿರುವವರಿಗಾಗಿ ತೆರಪಿನ ಶಿಕ್ಷಣ ಸಂಸ್ಥೆಗಳು ಪ್ರಶ್ನೋತ್ತರಗಳನ್ನು ಸಿದ್ಧಪಡಿಸಿ ರವಾನಿಸುತ್ತವೆ. ಜೊತೆಗೆವಿವರಣ ಕೈಪಿಡಿ, ಟಿಪ್ಪಣಿ ಇತ್ಯಾದಿಗಳನ್ನು ಒದಗಿಸಿಕೊಡುತ್ತವೆ. ಅಮೆರಿಕ ಒಂದರಲ್ಲೇ ಇಂಥ 7,000 ತೆರಪಿನ ಶಿಕ್ಷಣ ಸಂಸ್ಥೆಗಳು ಕೆಲಸ ಮಾಡುತ್ತಿವೆ.

	ಸಂಪರ್ಕ ಕಾರ್ಯಕ್ರಮ : ತೆರಪಿನ ಶಿಕ್ಷಣದ ವಿದ್ಯಾರ್ಥಿಗಿರುವ ಪ್ರಮುಖ ಕೊರತೆ ಅಧ್ಯಾಪಕನ ನೇರ ಸಂಪರ್ಕ ರಾಹಿತ್ಯ. ಸ್ವಲ್ಪಮಟ್ಟಿಗಾದರೂ ಈ ಕೊರತೆಯನ್ನು ತುಂಬಿ ಕೊಡುವ ಸಲುವಾಗಿಯೇ ಈ ಕಾರ್ಯಕ್ರಮ. ಶಿಕ್ಷಣ ಸಂಸ್ಥೆಯ ವ್ಯಾಪ್ತಿಗೆ ಅನುಗುಣವಾಗಿ ಹತ್ತಾರು ಕೇಂದ್ರಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ಒಂದು ವಾರಕ್ಕೆ ಕಡಿಮೆಯಿಲ್ಲದಂತೆ ಎಂಟು ವಾರಗಳಿಗೆ ಮೀರದಂತೆ ವರ್ಷದಲ್ಲಿ ಒಂದು ಅಥವಾ ಎರಡು ಸಾರಿ ಸಂಪರ್ಕ ತರಗತಿಗಳು ನಡೆಯುತ್ತವೆ. ವಿದ್ಯಾರ್ಥಿ ವ್ಯಾಸಂಗ ಮಾಡುವ ವಿಷಯವನ್ನು ಸಿಂಹಾವಲೋಕನ ಮಾಡಲನುಕೂಲವಾಗುವಂತೆ ವೇಳಾಪಟ್ಟಿಯಿರುತ್ತದೆ. ಉಪನ್ಯಾಸಗಳ ಜೊತೆಗೆ ವಿಚಾರ ವಿಮರ್ಶೆ, ಚರ್ಚೆ, ಪ್ರಬಂಧವಾಚನಗಳಿಗೂ ಅವಕಾಶ ಕಲ್ಪಿಸಲಾಗುತ್ತದೆ. ಪ್ರಧಾನವಾಗಿ ವಿದ್ಯಾರ್ಥಿ ತನ್ನ ವ್ಯಾಸಂಗ ಸಮಯದಲ್ಲಿ ಮೂಡಿದ ಸಮಸ್ಯೆಗಳಿಗೆ ಅಧ್ಯಾಪಕನಿಂದ ನೇರ ಪರಿಹಾರ ಪಡೆಯುವುದೇ ಈ ತರಗತಿಗಳ ಮುಖ್ಯ ಉದ್ದೇಶ. ಧ್ವನಿ ಮುದ್ರಿಕೆ, ಧ್ವನಿಮುದ್ರಿತ ಟೇಪುಗಳನ್ನು ಕೇಳಲೂ ಶೈಕ್ಷಣಿಕ ಚಲನಚಿತ್ರಗಳನ್ನು ನೋಡಲೂ ಅವಕಾಶ ಇರುತ್ತದೆ. ಒಂದು ಪ್ರದೇಶದ ಎಲ್ಲ ವಿದ್ಯಾರ್ಥಿಗಳೂ ಒಂದು ಕಡೆ ಕೂಡಿ ಪರಸ್ಪರ ಪರಿಚಯ ಮಾಡಿಕೊಳ್ಳುತ್ತಾರಾಗಿ ಮುಂದಿನ ವ್ಯಾಸಂಗಕ್ಕೆ ಅದು ನೆರವಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಬಾಲ್ಯದಲ್ಲಿ ಕಳೆದುಕೊಂಡಿದ್ದ ಅಥವಾ ಶಾಲಾಕಾಲೇಜುಗಳಲ್ಲಿ ಅನುಭವಿಸಿದ್ದ ವಿದ್ಯಾರ್ಥಿಸಹವಾಸ ಸಹಬಾಳ್ವೆ ಮತ್ತೆ ಅವರಿಗೆ ಲಭ್ಯವಾಗುತ್ತದೆ.

	ವ್ಯಾಸಂಗ ಕೇಂದ್ರಗಳು : ಶಿಕ್ಷಣ ಸಂಸ್ಥೆಯ ಕೇಂದ್ರದಿಂದ ಬಹುದೂರ ಇರುವ ವಿದ್ಯಾರ್ಥಿಯ ಉಪಯೋಗಕ್ಕಾಗಿ, ಆತ ವಾಸಿಸುವ ಪ್ರದೇಶಕ್ಕೆ ಸಮೀಪವಾಗಿರುವ ಸ್ಥಳಗಳಲ್ಲೇ ವ್ಯಾಸಂಗ ಕೇಂದ್ರಗಳಿರುತ್ತವೆ. ಸಾಮಾನ್ಯವಾಗಿ ಆಯಾ ಸ್ಥಳದ ಸರ್ಕಾರಿ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅವು ಹೊಂದಿಕೊಂಡಿರುತ್ತವೆ. ಕೇಂದ್ರ ಸಂಸ್ಥೆ ಪುಸ್ತಕಭಂಡಾರ ಅಲ್ಲಿರುತ್ತದೆ. ಸಮೀಪದ ವಿದ್ಯಾರ್ಥಿಗಳು ತಮ್ಮ ವಿರಾಮ ಕಾಲದಲ್ಲಿ ಇಲ್ಲಿಗೆ ಬಂದು ಆಧಾರಗ್ರಂಥಗಳನ್ನು ಓದಲೂ ಪಠ್ಯಗ್ರಂಥಗಳನ್ನು ಎರವಲಾಗಿ ಪಡೆಯಲೂ ಅವಕಾಶವಿರುತ್ತದೆ. ಕೆಲವು ಕೇಂದ್ರಗಳಲ್ಲಿ ಅಧ್ಯಾಪಕ ಮೇಲ್ವಿಚಾರಕರಿರುತ್ತಾರೆ. ವ್ಯಾಸಂಗ ಕಾಲದಲ್ಲಿ ಮೂಡಬಹುದಾದ ಸಾಮಾನ್ಯ ಸಮಸ್ಯೆಗಳಿಗೆ ಇವರು ಪರಿಹಾರ ದೊರಕಿಸಿಕೊಡುತ್ತಾರೆ. ಎಲ್ಲ ಸಮಯದಲ್ಲೂ ವಿದ್ಯಾರ್ಥಿಗೆ ಮಾರ್ಗದರ್ಶನ ನೀಡುವುದು ಈತನ ಕರ್ತವ್ಯ.

	ಆಸ್ಟ್ರೇಲಿಯ, ನ್ಯೂಜೀಲೆಂಡ್, ಕೆನಡ, ಅಮೆರಿಕ ಮತ್ತು ಇಂಗ್ಲೆಂಡ್‍ಗಳಲ್ಲಿ, `ಮೇಲ್ವಿಚಾರಕ ಗೃಹಶಿಕ್ಷಣ' ತುಂಬ ಜನಪ್ರಿಯವಾಗಿದೆ. ವ್ಯಾಸಂಗ ಕೇಂದ್ರದಲ್ಲಿರುವ ಅಧ್ಯಾಪಕ, ವಿದ್ಯಾರ್ಥಿಗೂ ಕೇಂದ್ರ ಶಿಕ್ಷಣ ಸಂಸ್ಥೆಗೂ ಸೇತುವೆಯಂತಿರುತ್ತಾನೆ. ಕೇಂದ್ರದಿಂದ ಸಿದ್ಧಪಾಠ, ಟಿಪ್ಪಣಿ, ಪೂರಕಗ್ರಂಥ, ಪಠ್ಯಗ್ರಂಥ ಇತ್ಯಾದಿ ಬೋಧನಸಾಮಗ್ರಿಗಳನ್ನು ಪಡೆದು ವಿದ್ಯಾರ್ಥಿಗೆ ತಲುಪಿಸುವುದು, ವಿದ್ಯಾರ್ಥಿ ಸಲ್ಲಿಸಿದ ಅನುಶೀಲನ ಪತ್ರಗಳನ್ನು ಪರಿಶೀಲಿಸಿ ನೇರ ಮಾರ್ಗದರ್ಶನ ನೀಡುವುದು, ಆಗಾಗ ಕೇಂದ್ರದಲ್ಲಿರುವ ಧ್ವನಿಮುದ್ರಿತ ಟೇಪು, ಶೈಕ್ಷಣಿಕ ಚಲನಚಿತ್ರ, ದೂರದರ್ಶಿನಿ ಹಾಗೂ ಆಕಾಶವಾಣಿ ಕಾರ್ಯಕ್ರಮಗಳನ್ನು ಏರ್ಪಡಿಸಿ ನಡೆಸುವುದು, ರಜಾಕಾಲಗಳಲ್ಲೂ ಭಾನುವಾರಗಳಂದೂ ವಿಷಯ ತಜ್ಞರಿಂದ ವಿಶೇಷ ಉಪನ್ಯಾಸ ಏರ್ಪಡಿಸುವುದೂ ಈತನ ಕರ್ತವ್ಯವೆ. ಈ ವಿದ್ಯಾರ್ಥಿ ಹಿತೈಷಿ ವರ್ಷಾಂತ್ಯದಲ್ಲಿ ಪರೀಕ್ಷೆಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಾನೆ. ಅನಗತ್ಯವಾಗಿ ಅಂಚೆಯಿಂದಾಗುವ ವಿಳಂಬ ಹಾಗೂ ಅಧಿಕ ವೆಚ್ಚಗಳನ್ನು ಈ ವ್ಯವಸ್ಥೆಯಿಂದ ಅಂಕೆಯಲ್ಲಿಡುವುದು ಸಾಧ್ಯ. ಮುಖ್ಯವಾಗಿ ಉತ್ಸಾಹದಿಂದ ವಿದ್ಯಾಭ್ಯಾಸ ಆರಂಭಿಸಿ, ನಾನಾ ಕಾರಣಗಳಿಂದ ಮಧ್ಯದಲ್ಲಿಯೇ ವ್ಯಾಸಂಗ ಬಿಡುವ ವಿದ್ಯಾರ್ಥಿಗೆ ಉತ್ತೇಜನ ನೀಡಿ, ಪ್ರೋತ್ಸಾಹಿಸಿ, ವ್ಯಾಸಂಗ ಮುಂದುವರಿಸುವಂತೆ ಮಾಡುವ ಪೋಷಕ ಹಿತೈಷಿಯೂ ಇವನೇ.

	ಆಕಾಶವಾಣಿ ಮತ್ತು ದೂರದರ್ಶಿನಿ : ವೈಜ್ಞಾನಿಕ ಸಾಧನೆ ಸಿದ್ಧಿಗಳಿಂದಾಗಿ ಇಂದಿನ ತೆರಪಿನ ಶಿಕ್ಷಣದ ವಿದ್ಯಾರ್ಥಿ ಏಕಲವ್ಯನಲ್ಲ. ಸಹಸ್ರಾರು ಮೈಲಿಗಳ ದೂರವೂ ಇಂದು ದೂರವಲ್ಲ. ನಿಯತಕಾಲಿಕ ವಿದ್ಯಾರ್ಥಿ ಪಡೆಯುವ ಎಲ್ಲ ಸೌಲಭ್ಯಗಳೂ ಇಂದು ಇವನಿಗೆ ಲಭ್ಯವಾಗಿದೆ. ಪಠ್ಯವಿಷಯವನ್ನು ಕುರಿತಾದ ಉಪನ್ಯಾಸಗಳನ್ನು ತನಗನುಕೂಲವಾದ ಸಮಯದಲ್ಲಿ ಈತ ಆಕಾಶವಾಣಿಯ ಮೂಲಕ ಕೇಳುತ್ತಾನೆ. ದೂರದರ್ಶಿನಿಯಿಂದಾಗಿ ಅಧ್ಯಾಪಕನ ಸಾಮೀಪ್ಯವನ್ನೂ ದೂರವಾಣಿಯಲ್ಲಿ ಸಂಭಾಷಣೆ ನಡೆಸುವುದರಿಂದ ಸಂಬಂಧವನ್ನೂ ಪಡೆಯುತ್ತಾನೆ. ಅಭಿವೃದ್ಧಿಗೊಂಡ ದೇಶಗಳಲ್ಲಿ ಬಹುವ್ಯಾಪಕವಾಗಿ ಈ ಸೌಲಭ್ಯ ಉಪಯೋಗವಾಗುತ್ತಿದೆ. ಭಾರತದಲ್ಲಿ ದೆಹಲಿ, ಪಂಜಾಬ್ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆದಿದ್ದಾರೆ. ಈಗ ತಾನೆ ಆರಂಭವಾಗಿರುವ `ಸೈಟ್ ಸ್ಯಾಟಲೈಟ್ ದೂರದರ್ಶಿನಿಯ ಮೂಲಕ ತೆರಪಿನ ಶಿಕ್ಷಣದ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಕಾರ್ಯಕ್ರಮ ವ್ಯವಸ್ಥೆಮಾಡುವ ದಿನಗಳು ಅತಿ ಸಮೀಪವಾಗುತ್ತಿವೆ.

	ಬೋಧನ ಸಾಮಗ್ರಿಗಳ ನಿಯಂತ್ರಣ ಹಾಗೂ ಗುಣಮಟ್ಟದ ರಕ್ಷಣೆ : ತೆರಪಿನ ಶಿಕ್ಷಣ ಶಿಕ್ಷಣವನ್ನು ಸರಳಗೊಳಿಸಿ ಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತೆ ಸಾಧಿಸಿರುವುದೇನೋ ನಿಜ. ಆದರೆ ಬೋಧನ ಸಾಮಗ್ರಿಗಳನ್ನು ನಿಯಂತ್ರಿಸಿ ಅವುಗಳ ಗುಣಮಟ್ಟವನ್ನು ಸದಾ ಹತೋಟಿಯಲ್ಲಿಟ್ಟುಕೊಳ್ಳುವುದು ಅಗತ್ಯ. ಶಿಕ್ಷಣಕ್ಕಾಗಿ ಕಾತರರಾಗಿರುವ ಜನತೆಯನ್ನು ಸುಲಭವಾಗಿ ಆಕರ್ಷಿಸಿ ಮೋಸಗೊಳಿಸಲು ನೂರಾರು ಖಾಸಗಿ ಸಂಸ್ಥೆಗಳು ಹುಟ್ಟಿಕೊಳ್ಳುತ್ತವೆ. ಹಲವು ವಿಶ್ವವಿದ್ಯಾಲಯಗಳು ತಮ್ಮ ಆರ್ಥಿಕ ಕೊರತೆ ತುಂಬಿಕೊಳ್ಳಲು ಇಂಥ ವ್ಯವಸ್ಥೆಗೆ ಕೈಹಾಕುವುದು ಅಸಂಭವನೀಯವೇನೂ ಅಲ್ಲ. ಈ ಶಿಕ್ಷಣ ಅನನುಭವಿಗಳ ಕೈಗೆ ಸಿಕ್ಕಾಗ ಜನತೆಗೆ ದೊರೆಯುವ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತದೆ. ಶಿಕ್ಷಣಮಟ್ಟವೂ ಕೀಳಾಗುತ್ತದೆ. ಈ ಸಂಭವನೀಯ ಅಪಾರಗಳಿಂದ ತೆರಪಿನ ಶಿಕ್ಷಣವನ್ನು ರಕ್ಷಿಸಿ, ಪಠ್ಯವಿಷಯಗಳ ಮೇಲ್ಮಟ್ಟವನ್ನು ಕಾಪಾಡಲು ನಿಯಂತ್ರಣಮಂಡಲಿ ಇರುವುದು ಅತ್ಯಗತ್ಯ. ಭಾರತದಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಸಮಗ್ರ ಭಾರತಕ್ಕೆ ಅನ್ವಯಿಸುವಂತೆ ಕೆಲಸ ಮಾಡುವ ನಿಯಂತ್ರಣ ಮಂಡಲಿಯೊಂದನ್ನು ನೇಮಿಸಲು ಕ್ರಮಕೈಗೊಂಡಿದೆ. ಈ ಮಂಡಲಿ ವಾರ್ಷಿಕ ಸಮ್ಮೇಳನಗಳನ್ನು ನಡೆಸಿ, ವಿಚಾರಗೋಷ್ಠಿಗಳನ್ನು ಏರ್ಪಡಿಸಿ, ತೆರಪಿನ ಶಿಕ್ಷಣ ಸಂಸ್ಥೆಗಳ ಅಧ್ಯಾಪಕ ಆಡಳಿತಾಧಿಕಾರಿಗಳ ಮಧ್ಯೆ ವಿಚಾರ ವಿನಿಮಯ ನಡೆಸಿ, ಶಿಕ್ಷಣ ಗುಣಮಟ್ಟವನ್ನು ಸ್ಥಿರವಾಗಿ ಉಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿವೆ. ತೆರಪಿನ ಶಿಕ್ಷಣ ಸಂಸ್ಥೆಗಳು ಸಿದ್ಧಪಡಿಸುವ ಬೋಧನ ಸಾಮಗ್ರಿಗಳ ವಿನಿಮಯ ಮಾಡಿಕೊಂಡು, ಕುಂದುಕೊರತೆಗಳಿದ್ದರೆ ತುಂಬಿಕೊಳ್ಳಲೂ ಈಗ ಇದರಿಂದ ಸಾಧ್ಯವಾಗುತ್ತಿದೆ.

	ಕೆನಡ, ಆಸ್ಟ್ರೇಲಿಯ, ನಾರ್ವೆ, ಸೋವಿಯೆತ್ ದೇಶ ಮತ್ತು ಭಾರತಗಳಲ್ಲಿ ಸಾಮಾನ್ಯ ಶಿಕ್ಷಣ ಕ್ರಮಕ್ಕೂ ತೆರಪಿನ ಶಿಕ್ಷಣ ಕ್ರಮಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಆದ್ದರಿಂದ ವಿದ್ಯಾ ಇಲಾಖೆ ಅಥವಾ ವಿಶ್ವವಿದ್ಯಾನಿಲಯಗಳು ಶಿಕ್ಷಣಕ್ರಮವನ್ನು ನಿಯಂತ್ರಿಸುತ್ತವೆ. ಇಂಗ್ಲೆಂಡಿನಲ್ಲಿ ತೆರಪಿನ ಶಿಕ್ಷಣ ಕ್ರಮ ಸ್ವತಂತ್ರವಾಗಿದೆ. ಶಿಕ್ಷಣ ಸಾಮಗ್ರಿಯ ಗುಣಮಟ್ಟ ಸಂರಕ್ಷಿಸಲು `ಅಸೋಸಿಯೇಷನ್ ಆಫ್ ಬ್ರಿಟಿಷ್ ಕರೆಸ್‍ಪಾಂಡೆನ್ಸ್ ಕಾಲೇಜಸ್ ಅಂಡ್ ದಿ ಕರೆಸ್‍ಪಾಂಡೆನ್ಸ್ ಸ್ಟ್ಯಾಂಡರ್ಡ್ ಅಸೋಸಿಯೇಷನ್ ಸ್ಥಾಪಿತವಾಗಿದೆ. ಆಸ್ಟ್ರಿಯ, ಬೆಲ್ಜಿಯಂ, ಡೆನ್ಮಾರ್ಕ್, ಇಂಗ್ಲೆಂಡ್, ಫಿನ್‍ಲ್ಯಾಂಡ್, ಫ್ರಾನ್ಸ್, ಪಶ್ಚಿಮ ಮತ್ತು ಪೂರ್ವ ಜರ್ಮನಿ, ಇಟಲಿ, ನೆದರ್‍ಲ್ಯಾಂಡ್ಸ್, ನಾರ್ವೆ, ಸ್ರ್ಪೇ, ಸ್ವೀಡನ್, ಸ್ವಿಟ್ಸರ್‍ಲ್ಯಾಂಡ್ಗಳ ತೆರಪಿನ ಶಿಕ್ಷಣ ಸಂಸ್ಥೆಗಳು ಕೂಡಿ ಬೋಧನೆಯ ಗುಣಮಟ್ಟ ಹಾಗೂ ವ್ಯಾವಹಾರಿಕ ಉನ್ನತಿಯನ್ನು ಅಂಕೆಯಲ್ಲಿಟ್ಟುಕೊಳ್ಳಲು 1962 ರಲ್ಲಿ `ದಿ ಯೂರೋಪಿಯನ್ ಕೌನ್ಸಿಲ್ ಫಾರ್ ಎಜುಕೇಷನ್ ಬೈ ಕರೆಸ್‍ಪಾಂಡೆನ್ಸ್ ಎಂಬ ಸಂಗವನ್ನು ನೆದರ್‍ಲ್ಯಾಂಡಿನ ಲೈಡೆನ್‍ನಲ್ಲಿ ಸ್ಥಾಪಿಸಿಕೊಂಡಿವೆ. ವಿಶ್ವದ ಬಹುಪಾಲು ರಾಷ್ಟ್ರಗಳ ಪ್ರಾತಿನಿಧಿಕ ಸಂಸ್ಥೆಯಾಗಿ ಕೆನಡಾದ ವಿಕ್ಟೋರಿಯಾದಲ್ಲಿ 1938 ರಲ್ಲೆ `ಇಂಟರ್‍ನ್ಯಾಷನಲ್ ಕೌನ್ಸಿಲ್ ಆಫ್ ಕರೆಸ್‍ಪಾಂಡೆನ್ಸ್ ಎಜಿಕೇಷನ್ಸ್ (ಐಸಿಸಿಇ); ಸ್ಥಾಪಿತವಾಯಿತು.

	ನಿರ್ವಹಣಾ ವೆಚ್ಚ : ಅಲ್ಪವೆಚ್ಚದಲ್ಲಿ ಅಧಿಕ ಜನಕ್ಕೆ ಶಿಕ್ಷಣ ನೀಡುವುದೇ ತೆರಪಿನ ಶಿಕ್ಷಣದ ಅಡಿಪಾಯ. ಕರ್ನಾಟಕದಂಥ ಚಿಕ್ಕ ರಾಜ್ಯ 1975 ನೆಯ ವರ್ಷದಲ್ಲಿ ಶಿಕ್ಷಣಕ್ಕಾಗಿ 92 ಕೋಟಿ ರೂಪಾಯಿಗಳನ್ನು ಅಂದರೆ ತನ್ನ ಆದಾಯದ ಮೂರನೆ ಒಂದು ಭಾಗದಷ್ಟು ಹಣವನ್ನು ಖರ್ಚು ಮಾಡಲು ಉದ್ದೇಶಿಸಿತ್ತು. ಈ ಮೊತ್ತಕ್ಕೆ ಕೇಂದ್ರದ ಸಹಾಯ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡುವ ವೆಚ್ಚವನ್ನು ಕೂಡಿಸಿದರೆ ಅದು ದ್ವಿಗುಣವಾಗುತ್ತದೆ. ಇದರಿಂದ ಲಾಭ ಪಡೆಯುವ ಜನ ರಾಜ್ಯದ ಒಟ್ಟು ಸಂಖ್ಯೆಯಲ್ಲಿ ಮೂರನೆ ಒಂದು ಭಾಗದಷ್ಟು ಮಾತ್ರ. ದುಡಿಮೆಯಲ್ಲಿರುವ ಅಥವಾ ವಯಸ್ಕ ಪ್ರಜೆ ಇದರಿಂದ ಎಳ್ಳಷ್ಟೂ ಲಾಭ ಪಡೆಯಲಾರ. ಜನಸಂಖ್ಯೆಗನುಗುಣವಾಗಿ ವರ್ಷವರ್ಷವೂ ಹೆಚ್ಚಾಗುತ್ತಿರುವ ಶಾಲಾಕಾಲೇಜುಗಳ ನಿರ್ವಹಣಾ ವೆಚ್ಚ ಯಾವ ಅಭಿವೃದ್ಧಿಗೊಳ್ಳುತ್ತಿರುವ ರಾಷ್ಟ್ರವೂ ಹೊರಲಾರದ ಪರಿಸ್ಥಿತಿಯನ್ನು ಮುಟ್ಟುತ್ತಿದೆ. ಈ ಅಧಿಕ ವೆಚ್ಚ ತಗ್ಗಿಸುವ ಸಲುವಾಗಿಯೇ ತೆರಪಿನ ಶಿಕ್ಷಣ ಉದಿಸಿದುದು, ಅಭಿವೃದ್ಧಿಗೊಂಡ ಶ್ರೀಮಂತ ರಾಷ್ಟ್ರಗಳಿಗೇ ಈ ವ್ಯವಸ್ಥೆ ಸಾಮಯಿಕವೆನಿಸಿರುವಾಗ ಉಳಿದ ರಾಷ್ಟ್ರಗಳು ಯೋಚಿಸುವಂತೆಯೇ ಇಲ್ಲ. ಎರಡು ದಶಕಗಂದೀಚೆಗೆ ಭಾರತದಲ್ಲಿ ಈ ಶಿಕ್ಷಣ ಪದ್ಧತಿಬೇರು ಬಿಡತೊಡಗಿದೆ. ಒಂದೇ ರೀತಿಯ ಶಿಕ್ಷಣ, ತರಬೇತಿ ಪಡೆಯಲು ವಿದ್ಯಾರ್ಥಿ ಅಪಾರ ಹಣ ಕಾಲವ್ಯಯ ಮಾಡಬೇಕಾಗಿದೆ. ಒಂದು ಅಂಕಿ ಅಂಶದ ಪ್ರಕಾರ ಅಮೆರಿಕದ ನಿಯತಕಾಲಿಕ ಕಾಲೇಜಿನ ವಿದ್ಯಾರ್ಥಿ ಒಂದು ಬೋಧನಾಗಂಟೆಗೆ 5.21 ಡಾಲರ್ ವೆಚ್ಚ ಮಾಡಿದರೆ, ತೆರಪಿನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಅದೇ ಅವಧಿಗೆ ಕೇವಲ 0.92 ಡಾಲರ್ ವೆಚ್ಚ ಮಡುತ್ತಾನೆ. ಅಂದರೆ ಒಬ್ಬನಿಗೆ 45 ರೂಪಾಯೀ ಖರ್ಚು ಮಾಡಿದರೆ ಅದೇ ಶಿಕ್ಷಣವನ್ನು ಮತ್ತೊಬ್ಬ 7 ರೂಪಾಯಿಗಳಲ್ಲಿ ಪಡೆಯುತ್ತಾನೆ.

	ಅಂಚೆ ಶಿಕ್ಷಣ ಕ್ರಮದಲ್ಲಿ ಕಟ್ಟಡಗಳಿಗಾಗಿ, ಪ್ರಯೋಗಶಾಲೆಗಳಿಗಾಗಿ, ಅಧ್ಯಾಪಕ ಹಾಗೂ ಆಡಳಿತವರ್ಗದ ನೇಮಕಕ್ಕಾಗಿ ತೊಡಗಿಸುವ ಬಂಡವಾಳ ಅಲ್ಪಪ್ರಮಾಣದ್ದು. ನಿಯತಕಾಲಿಕ ಕಾಲೇಜಿನಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಮಾಡುವ ವೆಚ್ಚದಲ್ಲಿ ತೆರಪಿನ ಶಿಕ್ಷಣಕ್ರಮದಲ್ಲಿ ಐದು ಸಾವಿರ ಜನರಿಗೆ ಶಿಕ್ಷಣ ನೀಡಬಹುದು. ಉದಾಹರಣೆಗೆ ಅಧ್ಯಾಪಕ ತರಬೇತಿ ಕಾಲೇಜೊಂದನ್ನು ಸ್ಥಾಪಿಸಿ, ನೂರು ಜನ ಅಧ್ಯಾಪಕರಿಗೆ ತರಬೇತಿ ನೀಡಲು 5 ಲಕ್ಷ ರೂಪಾಯಿ ವೆಚ್ಚ ತಗುಲಿದರೆ, ಇಷ್ಟೇ ವೆಚ್ಚದಲ್ಲಿ ಒಂದು ಸಾವಿರ ಅಧ್ಯಾಪಕರನ್ನು ತೆರಪಿನ ಶಿಕ್ಷಣ ಕ್ರಮದಲ್ಲಿ ತರಬೇತಿ ಮಾಡಬಹುದು. ವಿದ್ಯಾರ್ಥಿ ನೋಂದಣಿ ಸಂಖ್ಯೆ ಕುಸಿದರೆ ನಿಯತಕಾಲಿಕ ಕಾಲೇಜಿಗೆ ಹಾಕಿದ ಬಂಡವಾಳ ನಷ್ಟವಾಗುವುದರ ಜೊತೆಗೆ ಸಿಬ್ಬಂದಿಯೂ ನಿರುದ್ಯೋಗಿಗಳಾಗಬೇಕಾಗುತ್ತದೆ. ಸರ್ಕಾರಕ್ಕೆ ಹೊರೆಯಾಗಬಹುದಾದ ಇಂಥ ನಷ್ಟವನ್ನು ತಪ್ಪಿಸಲು ತೆರಪಿನ ಶಿಕ್ಷಣ ಸಮರ್ಥವಾಗಿದೆ.

	ಭಾರತೀಯ ಇತಿಹಾಸ : ತೆರಪಿನ ಶಿಕ್ಷಣ ವಯಸ್ಕ ಶಿಕ್ಷಣವೇ ಎಂಬುದನ್ನು ಈ ಹಿಂದೆ ಹೇಳಿದೆ. ಅಂತೆಯೇ ವಯಸ್ಕ ಶಿಕ್ಷಣದ ಇತಿಹಾಸ ತೆರಪಿನ ಶಿಕ್ಷಣದ ಇತಿಹಾಸವೂ ಹೌದು. ವಯಸ್ಕ ಶಿಕ್ಷಣದ ಮೂಲ ಗುರಿ ಸಾಕ್ಷರತಾ ಪ್ರಚಾರ. ಹಿಂದಿನ ಮೈಸೂರು ರಾಜ್ಯದ ವಯಸ್ಕರ ಶಿಕ್ಷಣ ಸಮಿತಿಗೆ ಸುಮಾರು 60 ವರ್ಷಗಳ ಇತಿಹಾಸವಿದೆ. ಲಕ್ಷೋಪಲಕ್ಷ ಜನರಿಗೆ ಅಕ್ಷರಾಭ್ಯಾಸ ಮಾಡಿಸಿ, ಹತ್ತಾರು ವಿದ್ಯಾಪೀಠಗಳನ್ನು ಸ್ಥಾಪಿಸಿ ಗ್ರಾಮಾಂತರ ಜನತೆಯ ಶೈಕ್ಷಣಿಕ ಮಟ್ಟವನ್ನು ಅದು ಹೆಚ್ಚಿಸಿದೆ. ನೂರಾರು ಚಿಕ್ಕ ಚಿಕ್ಕ ಪುಸ್ತಿಕೆಗಳನ್ನು ವಯಸ್ಕರಿಗಾಗಿ ತಯಾರಿಸಿ ಎಲ್ಲ ವಯಸ್ಕನಿಗೂ ಸುಲಭವಾಗಿ ದೊರೆಯುವಂತೆ ಮಾಡಿದೆ. `ಬೆಳಕು ಪತ್ರಿಕೆಯನ್ನು ಪ್ರಕಟಿಸಿ ವಯಸ್ಕರಲ್ಲಿ ವಿಚಾರ ಪ್ರಚೋದನೆ ಮಾಡಿದೆ. ಉಪನ್ಯಾಸ, ಚಲನಚಿತ್ರ ಪ್ರದರ್ಶನಗಳ ಮೂಲಕ ಅನಕ್ಷರಸ್ಥರ ಅಂಧಕಾರವನ್ನು ನೀಗಲು ಪ್ರಯತ್ನಿಸಿದೆ. ಈ ಸ್ತುತ್ಯಾರ್ಹ ಕೆಲಸಕ್ಕಾಗಿ ಸಂಸ್ಥೆ ಹಲವಾರು ಅಂತರ ರಾಷ್ಟ್ರೀಯ ಗೌರವ, ಪಾರಿತೋಷಕಗಳನ್ನು ಪಡೆದಿದೆ.

	1916 ರಲ್ಲಿ ಸ್ಥಾಪಿತವಾದ ಮೈಸೂರು ವಿಶ್ವವಿದ್ಯಾನಿಲಯದ ಪ್ರಥಮ ಸೆನೆಟ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ವಿಶ್ವವಿದ್ಯಾನಿಲಯದ ಮಹಾಕುಲಾಧಿಪತಿ ಶ್ರೀ ಕೃಷ್ಣರಾಜ ಒಡೆಯರ್ ಅವರು `ಕಾರಣಾಂತರಗಳಿಂದ ಶಿಕ್ಷಣ ಕ್ರಮಕ್ಕೆ ಹಾಜರಾಗಲು ಸಾಧ್ಯವಿಲ್ಲದ ನಮ್ಮ ಇತರ ಪ್ರಜೆಗಳಿಗೂ ಜ್ಞಾನಪ್ರಸಾರ ಮಾಡುವುದರಲ್ಲಿ ಈ ನಮ್ಮ ವಿಶ್ವವಿದ್ಯಾನಿಲಯ ಕಾರ್ಯಾಸಕ್ತವಾಗಬೇಕು ಎಂದು ಸೂಚಿಸಿದರು. ಅವರ ಸೂಚನೆಯಂತೆ ವಿಶ್ವವಿದ್ಯಾನಿಲಯದ ಒಂದು ಶಾಖೆಯಾಗಿ ಪ್ರಸಾರಾಂಗ, ಪ್ರಕಟಣ ವಿಭಾಗಗಳು ಆರಂಭವಾದವು. ವಿಶ್ವವಿದ್ಯಾನಿಲಯದ ವಿದ್ವಾಂಸರು ಗ್ರಾಮಾಂತರ ಪ್ರದೇಶಗಳಿಗೆ ಹೋಗಿ ಕಲೆ, ಸಂಗೀತ, ಸಾಹಿತ್ಯ, ವಿಜ್ಞಾನ ವಿಷಯಗಳನ್ನು ಕುರಿತು ಕನ್ನಡದಲ್ಲಿ ಉಪನ್ಯಾಸ ಮಾಡುತ್ತಿದ್ದರು. ಈ ಉಪನ್ಯಾಸಗಳನ್ನು ಚಿಕ್ಕ ಪುಸ್ತಿಕೆಗಳಾಗಿ ಪ್ರಕಟಿಸಿ, ಸುಲಭ ಬೆಲೆಗೆ ಜನರಿಗೆ ದೊರಕಿಸಿಕೊಡುವ ಯೋಜನೆ ಕಾರ್ಯರೂಪಕ್ಕೆ ಬಂದಿತು. ಈ ಯೋಜನೆಯನ್ವಯ ಈಗಾಗಲೇ ಸಹಸ್ರಾರು ಉಪನ್ಯಾಸಗಳು ನಡೆದು ಅಷ್ಟೇ ಸಂಖ್ಯೆಯ ಪುಸ್ತಿಕೆಗಳೂ ಅಚ್ಚಾಗಿವೆ.
	1948 ರಲ್ಲಿ ಪೂನಾ ವಿಶ್ವವಿದ್ಯಾನಿಲಯವೂ 1950 ರಲ್ಲಿ ದೆಹಲಿ ವಿಶ್ವವಿದ್ಯಾನಿಲಯಯವೂ ವಯಸ್ಕರ ಶಿಕ್ಷಣ ಯೋಜನೆಯನ್ನಾರಂಭಿಸಿದುವು. ಸುವ್ಯವಸ್ಥಿತ ಸ್ವಯಂ ಪೂರ್ಣ ವಯಸ್ಕ ಶಿಕ್ಷಣ ವಿಭಾಗ ರಾಜಸ್ಥಾನ್ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿದೆ. ಇತ್ತೀಚೆಗೆ ಕರ್ನಾಟಕ, ಬೆಂಗಳೂರು ಮತ್ತು ಮುಂಬಯಿ ವಿಶ್ವವಿದ್ಯಾನಿಲಯಗಳು ಈ ವಿಭಾಗವನ್ನಾರಂಭಿಸಿವೆ. `ವಿಶ್ವವಿದ್ಯಾನಿಲಯ ವಯಸ್ಕರ ಶಿಕ್ಷಣ ಸಂಘ 1965 ರಲ್ಲಿ ಸ್ಥಾಪಿತವಾಗಿ ಭಾರತಾದ್ಯಂತ ನಡೆಯುತ್ತಿರುವ ವಯಸ್ಕರ ಶಿಕ್ಷಣವನ್ನು ತನ್ನ ನಿಯಂತ್ರಕ್ಕೊಳಪಡಿಸಿಕೊಂಡಿದೆ.

	ಭಾರತದಲ್ಲಿ ಏಕಲವ್ಯ ಶಿಕ್ಷಣ ಹೊಸದೇನೂ ಅಲ್ಲ. ನಿರ್ಜೀವ ವಸ್ತುವಾದ ಮೋಡದೊಂದಿಗೆ ಪ್ರೇಮಸಂದೇಶ ಕಳುಹಿಸಿದ, ಯಕ್ಷ. `ಅಂಚೆ ಯನ್ನು ಪತ್ರವಾಹಕವನ್ನಾಗಿಸಿಕೊಂಡ, ನಳ. ಅಂತೆಯೇ ಆಧುನಿಕ ಅಂಚೆ ವ್ಯವಸ್ಥೆಗೆ ಹೊಂದಿಕೊಂಡು ಮೂಡಿಬಂದುದು ಅಂಚೆ ಶಿಕ್ಷಣ. 1962 ರಲ್ಲಿ ದೆಹಲಿ ವಿಶ್ವವಿದ್ಯಾನಿಲಯ ಮೊಟ್ಟಮೊದಲ ಬಾರಿಗೆ ಅಂಚೆ ಶಿಕ್ಷಣವನ್ನಾರಂಭಿಸಿತು. ಸಾಮಾನ್ಯ ಬಿ. ಎ. ತರಗತಿಗಳಿಗೆ ಶಿಕ್ಷಣ ಆರಂಭವಾಗಿ ಮೊದಲ ವರ್ಷವೇ ಸುಮಾರು 2500 ಜನ ವಿದ್ಯಾರ್ಥಿಗಳು ನೋಂದಣಿಯಾದರು. ಮುಂದಿನ ವರ್ಷಗಳಲ್ಲಿ ಬಿ. ಎಸ್‍ಸಿ. ತರಗತಿಗಳಿಗೂ ಶಿಕ್ಷಣ ನೀಡುವ ಏರ್ಪಾಡಾಯಿತು. 1970 ರ ಹೊತ್ತಿಗೆ ವಿದ್ಯಾರ್ಥಿ ಸಂಖ್ಯೆ 20,000 ಮುಟ್ಟಿತು. ಇದರಿಂದ ಉತ್ತೇಜಿತಗೊಂಡು, ದೆಹಲಿಯ ಅನಂತರ ಪಂಜಾಬ್, ಮೀರತ್ ರಾಜಸ್ಥಾನ, ಹಿಮಾಚಲ ಪ್ರದೇಶ ಇತ್ತೀಚೆಗೆ ಮುಂಬಯಿ, ಮಧುರೆ, ವೆಂಕಟೇಶ್ವರ, ಆಂಧ್ರ, ಉತ್ಕಲ್ ವಿಶ್ವವಿದ್ಯಾಲಯಗಳೂ ಅಂಚೆ ಶಿಕ್ಷಣವನ್ನು ಆರಂಭಿಸಿದವು.

	ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಮೈಸೂರು ವಿಶ್ವವಿದ್ಯಾನಿಲಯ 1969 ರಲ್ಲಿ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯನ್ನು ಆರಂಭಸಿತು. 1970 - 71 ರ ಪ್ರಥಮ ಶೈಕ್ಷಣಿಕ ವರ್ಷದಲ್ಲಿ ಪ್ರಿಯೂನಿವರ್ಸಿಟಿ, ಬಿ.ಎ. ತರಗತಿಗಳಿಗೆ ನೋಂದಣಿಯಾಗಿ 1700 ಜನ ವಿದ್ಯಾರ್ಥಿಗಳು ಸೇರಿದರು. 71 - 72 ರಲ್ಲಿ ಬಿ.ಕಾಮ್. ತರಗತಿಗಳೂ 72 - 73 ರಲ್ಲಿ ಭಾರತದಲ್ಲೇ ಪ್ರಪ್ರಥಮ ಬಾರಿಗೆ ಸ್ನಾತಕೋತ್ತರ ತರಗತಿಗಳೂ ಡೊಪ್ಲೊಮಾ ಮತ್ತು ಸರ್ಟಿಫಿಕೇಟ್ ಶಿಕ್ಷಣ ತರಗತಿಗಳೂ ಆರಂಭಿಸಲ್ಪಟ್ಟವು. 74 - 75 ರಲ್ಲಿ ಮತ್ತೆ ಮೊದಲ ಬಾರಿಗೆ ಬ್ಯಾಚುಲರ್ ಆಫ್ ಜನರಲ್ ಲಾ ಹಾಗೂ ಬಿ. ಇಡಿ. ಶಿಕ್ಷಣ ತರಗತಿಗಳೂ ಪ್ರಾರಂಭವಾದವು. 1975 - 76 ನೆಯ ಶಿಕ್ಷಣ ವರ್ಷದಲ್ಲಿ 9 ವಿವಿಧ ಉನ್ನತ ಶಿಕ್ಷಣ ತರಗತಿಗಳಿದ್ದು ಒಟ್ಟು ವಿದ್ಯಾರ್ಥಿ ಸಂಖ್ಯೆ 10,000 ಮುಟ್ಟಿತು. 1972 ರ ಅಕ್ಟೋಬರ್ ತಿಂಗಳಲ್ಲಿ ಅಖಿಲ ಭಾರತ ಅಂಚೆ ಶಿಕ್ಷಣ ಸಂಸ್ಥೆಗಳ ನಿರ್ದೇಶಕರ, ಅಧ್ಯಾಪಕರ ಮತ್ತು ವಿಶ್ವವಿದ್ಯಾಲಯಗಳ ಕುಲಪತಿಗಳ ಸಮ್ಮೇಳನ ನಡೆಸಿತು. ಮೈಸೂರು ವಿಶ್ವವಿದ್ಯಾನಿಯ ಅಂಚೆ ಶಿಕ್ಷಣ ಸಂಸ್ಥೆಯನ್ನು ಮುಕ್ತ ವಿದ್ಯಾನಿಲಯವಾಗಿ ಮಾರ್ಪಡಿಸುವ ಪ್ರಥಮ ಹೆಜ್ಜೆಯಾಗಿ 1975 - 76 ನೆಯ ಶಿಕ್ಷಣ ವರ್ಷದಿಂದ 50 ವರ್ಷ ವಯಸ್ಸಾದ ಯಾರೇ ಆದರೂ ಯಾವ ಪೂರ್ವಶಿಕ್ಷಣಾರ್ಹತೆಯೂ ಇಲ್ಲದೆ ಯಾವುದೇ ಶಿಕ್ಷಣ ತರಗತಿಗಾದರೂ ಸೇರಿ ವ್ಯಾಸಂಗ ಮಾಡಲು ಅನುಮತಿ ನೀಡಿದೆ. ಭಾರತಾದಾದ್ಯಂತ ಇಂದು ಅಂಚೆ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು ನೂರು ಸಾವಿರಕ್ಕೂ ಹೆಚ್ಚು ಜನ ಅಂಚೆ ಮೂಲಕ ವ್ಯಾಸಂಗ ಮಾಡುತ್ತಿದ್ದಾರೆ.

	ಜಾಗತಿಕ ಇತಿಹಾಸ : ಭಾರತದಲ್ಲಿ ಈ ಶಿಕ್ಷಣ ಪದ್ಧತಿ ಎರಡು ದಶಕಗಳಷ್ಟು ಹಳೆಯದಾದರೂ ವಿಶ್ವದಲ್ಲಿ ಇದರ ಇತಿಹಾಸ ತುಂಬ ಪ್ರಾಚೀನವಾದುದು. ಪಾಶ್ಚಾತ್ಯ ಇತಿಹಾಸಕಾರರು ಅಂಚೆ ಶಿಕ್ಷಣವನ್ನು ಬರೆವಣಿಗೆಯಷ್ಟೇ ಪುರಾತನವಾದುದೆಂದು ಹೇಳುತ್ತಾರೆ. ಅಪೋಸಲ್ ಪಾಲ್ ಮುಂಚಿನ ಕ್ರೈಸ್ತ ಜನಾಂಗಕ್ಕೆ ಬರೆಯುತ್ತಿದ್ದ ಬೋಧನಾತ್ಮಕ ಪತ್ರಗಳಿಂದ ಅಂಚೆ ಶಿಕ್ಷಣ ಉದಿಸಿತೆಂದು ಹೇಳುತ್ತಾರೆ. ಪ್ರಾಚೀನ ಗ್ರೀಕ್ ಜನಾಂಗ ಆತೆನ್ಸ್ ಪಟ್ಟಣದಿಂದ ವಿವಿಧ ಪ್ರದೇಶಗಳೊಂದಿಗೆ ಹೊಂದಿದ್ದ ಸಂಪರ್ಕ ವ್ಯವಸ್ಥೆಯನ್ನುಪಯೋಗಿಸಿಕೊಂಡು ಪತ್ರ ರೂಪದ ಶಿಕ್ಷಣವನ್ನು ರೂಪಿಸಿದರು. ಸೀಸರ್, ಸಿಸಿರೊ ಮತ್ತು ಹಾರೆಸ್ ಹಾಗೂ ಪ್ರಾಚೀನ ಕ್ರೈಸ್ತ ಪಾದ್ರಿಗಳಾದ ಸಿಪ್ರಿಯಾನ್, ಅಂಬ್ರೋಸ್ ಮತ್ತು ಆಗಸ್ಟೀನರ ಪತ್ರಗಳು ಬೋಧನಾತ್ಮಕವಾಗಿದ್ದು ಮುಂದಿನ ಜನಾಂಗಕ್ಕೆ ಮಾರ್ಗದರ್ಶಕ ಮಾದರಿ ಶೈಕ್ಷಣಿಕ ಪತ್ರಗಳಾದವು. ಅಚ್ಚು ಯಂತ್ರ ಮತ್ತು ಅಂಚೆ ವ್ಯವಸ್ಥೆ ಅಸ್ತಿತ್ವಕ್ಕೆ ಬರುವ ಮುಂಚೆಯೇ ಮಧ್ಯಕಾಲೀನ ಶಿಕ್ಷಣತಜ್ಞರು ದೂರದೂರದ ತಮ್ಮ ಶಿಷ್ಯರಿಗೆ ಪತ್ರಗಳ ಮೂಲಕ ಶಿಕ್ಷಣ ನೀಡುತ್ತಿದ್ದರು. ಪಾಪಲ್ ಎನ್ ಸೈಕ್ಲಿಕಲ್ ಪತ್ರಗಳನ್ನು ಶತಮಾನಗಳಷ್ಟು ಕಾಲ ಬಳಸಿಕೊಂಡರು. ಅಮೆರಿಕದ ಕ್ರಾಂತಿ ಕಾಲದಲ್ಲಿ ವಿವಿಧ ಪ್ರದೇಶದ ಮುಖಂಡರನ್ನು ಒಂದುಗೂಡಿಸಿ ಕ್ರಾಂತಿಯ ಮಹತ್ತ್ವವನ್ನು ತಿಳಿಸಿ, ಕ್ರಾಂತಿ ಯಶಸ್ವಿಯಾಗುವಂತೆ ಮಾಡಿದವು ಈ ಶೈಕ್ಷಣಿಕ ಪತ್ರಗಳು. ಹೀಗೆ ಆರಂಭಕಾಲದಲ್ಲೇ ಅಂಚೆ ಶಿಕ್ಷಣಕ್ಕೆ ಸುಭದ್ರ ಅಡಿಪಾಯ ಸಿಕ್ಕಿತು.

	ಅಂಚೆ ಶಿಕ್ಷಣ ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ಆರಂಭವಾದುದು ಇಂಗ್ಲೆಂಡಿನಲ್ಲಿ. ಅನಂತರ 19 ನೆಯ ಶತಮಾನದ ಮಧ್ಯಭಾಗದಲ್ಲಿ ಜರ್ಮನಿ ಮತ್ತು ಅಮೆರಿಕಗಳಲ್ಲಿ ಅಸ್ತಿತ್ವಕ್ಕೆ ಬಂತು. ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಅಚ್ಚುಕೂಟ ಅಸ್ತಿತ್ವಕ್ಕೆ ಬಂದು ಅಚ್ಚಾದ ಪುಸ್ತಕಗಳ ಮೂಲಕ ಶಿಕ್ಷಣ ನೀಡುವುದು ಸರಳವೂ ಕಡಿಮೆ ಖರ್ಚಿನದೂ ಆಗಿದ್ದುದರಿಂದ ಈ ಶಿಕ್ಷಣಪದ್ಧತಿ ಹೆಚ್ಚು ವ್ಯಾಪಕವಾಯಿತು. ಜನತೆಯ ಜ್ಞಾನ ತಪಾಸೆಯನ್ನು ತಣಿಸಲು ಪುಸ್ತಕಗಳು ಅಚ್ಚಾದವು. ವೃತ್ತಪತ್ರಿಕೆ, ಸಾಪ್ತಾಹಿಕ, ಮಾಸಿಕಗಳು ಹುಟ್ಟಿಕೊಂಡವು. ಜನತೆಯ ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ, ಧಾರ್ಮಿಕ ಸುಧಾರಣೆಗಳಿಗಾಗಿ ಉಚಿತ ಶಿಕ್ಷಣ ನೀಡುವ ಧಾರ್ಮಿಕ ಸಂಘಸಂಸ್ಥೆಗಳು ಉದಯವಾದವು. ಕೈಗಾರಿಕೆಗಳು ಹೆಚ್ಚು ಹೆಚ್ಚು ಸ್ಥಾಪಿತವಾದಂತೆ ಕಾರ್ಮಿಕ ಸಂಖ್ಯೆಯೂ ಹೆಚ್ಚಿತು. ಸುಶಿಕ್ಷಿತ ಕಾರ್ಮಿಕರ ಅಗತ್ಯವೂ ಹೆಚ್ಚಾಯಿತು. ತಾಂತ್ರಿಕ, ವೃತ್ತಿಶಿಕ್ಷಣ ಶಾಲಾಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಸಂಖ್ಯೆಗಿಂತ ಅಧಿಕಾಧಿಕವಾಗಿ ಬೇಕಾಯಿತು. ಈ ಕೊರತೆ ತುಂಬಿಕೊಳ್ಳಲು ವಿಶ್ವದ ಮುಂದುವರಿದ ರಾಷ್ಟ್ರಗಳು ಅಂಚೆ ಶಿಕ್ಷಣದ ಮಾಧ್ಯಮವನ್ನು ಉಪಯೋಗಿಸಿಕೊಂಡವು. ಹೀಗೆ ಅಂಚೆ ಶಿಕ್ಷಣ ಸಾಮಾನ್ಯ ಜನರ ಪ್ರಿಯ ವಿಶ್ವವಿದ್ಯಾನಿಲಯಗಳಾದವು.

	ಇಂಗ್ಲೆಂಡಿನ ಪಿಟ್‍ಮನ್ ಷಾರ್ಟ್‍ಹ್ಯಾಂಡ್ ಸೃಷ್ಟಿಕರ್ತ ಪತ್ರವ್ಯವಹಾರ ಶಿಕ್ಷಣದ ಜನಕನಾದ. 1840 ರಲ್ಲಿ ಪೆನಿ ಅಂಚೆ ಕಾರ್ಡುಗಳ ಮೂಲಕ ತನ್ನ ದೂರದೂರದ ಶಿಷ್ಯರಿಗೆ ಶೀಘ್ರಲಿಪಿ ಶಿಕ್ಷಣ ನೀಡಲಾರಂಭಿಸಿದ. ವಿದ್ಯಾರ್ಥಿಗಳು ಅಂಚೆಯಲ್ಲಿ ಬರುತ್ತಿದ್ದ ಈ ಪತ್ರಗಳನ್ನು ಪಡೆದು, ಅಭ್ಯಾಸ ಮಾಡಿ, ಬೈಬಲ್ಲಿನ ಕೆಲವು ಸೂಕ್ತಿಗಳನ್ನು ಶೀಘ್ರಲಿಪಿಯಲ್ಲಿ ಬರೆದು ಪರಿಶೀಲನೆಗಾಗಿ ಹಿಂತಿರುಗಿಸುತ್ತಿದ್ದರು. 1856 ರಲ್ಲಿ ಫ್ರಾನ್ಸಿನ ಚಾಲ್ರ್ಸ್ ಟೂಸ್ಯಾನ್ ಮತ್ತು ಜರ್ಮನಿಯ ಗುಸ್ಟಾಫ್ ಲಾಂಗೆನ್‍ಷೈಬ್ ಕೂಡಿ ಅಂಚೆ ಮೂಲಕ ಶಿಕ್ಷಣ ನೀಡುವ ಆಧುನಿಕ ಭಾಷಾ ಶಿಕ್ಷಣ ಸಂಸ್ಥೆಯನ್ನು ಬರ್ಲಿನ್ ನಗರದಲ್ಲಿ ಸ್ಥಾಪಿಸಿದರು. 1860 ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಹಿಳಾ ವಿದ್ಯಾರ್ಥಿಗಳು ಪುರುಷ ಪ್ರಾಧ್ಯಾಪಕರಿಂದ ನಿವಾಸಿ ವಿದ್ಯಾರ್ಥಿಗಳಾಗಿ ಶಿಕ್ಷಣ ಪಡೆಯುತ್ತಿದ್ದ ಬಗ್ಗೆ ಕುಚೋದ್ಯದ ಟೀಕೆಗಳು ಹುಟ್ಟಿಕೊಂಡ ಕಾರಣದಿಂದಾಗಿ, ಈ ಮಹಿಳಾ ವಿದ್ಯಾರ್ಥಿಗಳು ತಮ್ಮ ತಮ್ಮ ಗೃಹಗಳಲ್ಲೇ ವ್ಯಾಸಂಗ ಮಾಡಲನುಕೂಲವಾಗುವಂತೆ ಅಂಚೆ ಶಿಕ್ಷಣ ಪ್ರಾರಂಭವಾಯಿತು. 1880 ರಲ್ಲಿ ಸ್ಕಾಟ್‍ಲೆಂಡಿನ ಸ್ಕೆರೀಸ್ ಕಾಲೇಜು ಸಿವಿಲ್ ಸರ್ವಿಸ್ ಮತ್ತು ವ್ಯಾವಹಾರಿಕ ಶಿಕ್ಷಣಗಳಲ್ಲಿ ತರಬೇತಿ ನೀಡಲು ಅಂಚೆ ಶಿಕ್ಷಣವನ್ನು ಆರಂಭಿಸಿತು.

	1873 ರ ಸುಮಾರಿನಲ್ಲಿ ಅಮೆರಿಕದ ಮೆತಾಡಿಸ್ಟ್ ಮಿಷನ್ ತನ್ನ ಧಾರ್ಮಿಕ ಶಿಕ್ಷಣಾರ್ಥಿಗಳಿಗೆ ಶಿಕ್ಷಣ ನೀಡಲು ಅಂಚೆ ಶಿಕ್ಷಣ ಅರಂಭಿಸಿ, ಯಶಸ್ವಿಯಾಗಿ ಕೆನಡ ಮತ್ತು ಬ್ರಿಟನ್‍ಗಳಲ್ಲಿ ಈ ಶಿಕ್ಷಣ ಶಾಖೆಗಳನ್ನು ಪ್ರಾರಂಭಿಸಿದರು. ಹೀಬ್ರೂ ಪ್ರಾಧ್ಯಾಪಕ ಡಾ. ವಿಲಿಯಮ್ ರೈನೆ ಹಾರ್ಪರ್ ನ್ಯೂಯಾರ್ಕ್ ಸ್ಟೇಟಿನ ಚೌಟಾಕುವಾದಲ್ಲಿ ಭಾಷಾಸಂಸ್ಥೆಯೊಂದನ್ನು ಸ್ಥಾಪಿಸಿದ. ಬೇಸಗೆಯಲ್ಲಿ ನಿವಾಸೀ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಚಳಿಗಾಲದಲ್ಲಿ ದೂರದೂರ ವಾಸಿಸುವ ಅವರಿಗಾಗಿ ಅಂಚೆಯ ಮೂಲಕ ಪಾಠಗಳನ್ನು ಕಳುಹಿಸಲಾರಂಭಿಸಿದ. ಈ ಶಿಕ್ಷಣ ಸಂಸ್ಥೆ ಯಶಸ್ವಿಯಾದಾಗ ಇದೇ ಮಾದರಿಯ ಹಲವಾರು ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡವು. ಡಾ. ಹಾರ್ಪರ್ 1891 ರಲ್ಲಿ ಚಿಕಾಗೋ ವಿಶ್ವವಿದ್ಯಾಲಯದ ಪ್ರಥಮ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ತನ್ನ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದಲ್ಲಿ ಅಂಚೆ ಶಿಕ್ಷಣವನ್ನು ಅಸ್ತಿತ್ವಕ್ಕೆ ತಂದ.

	ಅಮೆರಿಕದ ಗಣಿಗಳಲ್ಲಿ ಕೆಲಸ ಮಾಡುತ್ತಿದ್ದ ಅಸಂಖ್ಯಾತ ಅಶಿಕ್ಷಿತ ಗಣಿಕಾರ್ಮಿಕರು ಕೆಲಸ ಮಾಡುವಾಗ ಅಪಘಾತಗಳಿಗೆ ಸಿಕ್ಕಿ ಅಸು ನೀಗುತ್ತಿದ್ದರು. ಇವರೆಲ್ಲರನ್ನೂ ಒಂದೆಡೆ ಸೇರಿಸಿ ಶಿಕ್ಷಣ ನೀಡುವುದು ಅಸಾಧ್ಯದ ಕೆಲಸವಾಗಿತ್ತು. ಮೈನಿಂಗ್ ಹೆರಾಲ್ಡ್ ಪತ್ರಿಕೆಯ ಸಂಪಾದಕ ತಾಮಸ್ ಜೆ. ಫಾಸ್ಟರ್ ತನ್ನ ಪತ್ರಿಕೆಯಲ್ಲಿ ಗಣಿ ಕಾರ್ಮಿಕರಿಗಾಗಿ ಪ್ರಶ್ನೋತ್ತರ ವಿಭಾಗ ಆರಂಭಿಸಿದೆ. ಇದು ಫಲಪ್ರದವಾಗಿ ಜನಪ್ರಿಯವಾಯಿತು. 1890 ರಲ್ಲಿ ಫಾಸ್ಟರ್ `ಫಾಸ್ಟರ್ ಇಂಟರ್ ನ್ಯಾಷನಲ್ ಕರೆಸ್‍ಪಾಂಡೆನ್ಸ್ ಸ್ಕೂಲ್ ಸ್ಥಾಪಿಸಿದ. 1900 ರ ಹೊತ್ತಿಗೆ ಈ ಶಾಲೆಯಲ್ಲಿ ಅಮೆರಿಕದ 250,000 ವಿದ್ಯಾರ್ಥಿಗಳು ಶಿಕ್ಷಣ ಪಡೆದರು. 1889 ರಲ್ಲಿ ಕೆನಡದ ಆಂಟೇರಿಯೊ ಪ್ರದೇಶದ ಕಿಂಗ್ಸ್‍ಟನ್ನಿನ ಕ್ವೀನ್ಸ್ ವಿಶ್ವವಿದ್ಯಾಲಯ ಅಂಚೆ ಶಿಕ್ಷಣ ಪ್ರಾರಂಭಿಸಿತು. ಬೇಸಗೆಯ ರಜಾದಿನಗಳಲ್ಲಿ ವಿಶ್ವವಿದ್ಯಾಲಯದ ಪ್ರಯೋಗಶಾಲೆಗಳನ್ನು ಉಪಯೋಗಿಸಿಕೊಳ್ಳುವ ಅವಕಾಶ ಇರುವ ಕ್ವೀನ್ಸ್ ಇಂದು ಕೆನಡದಲ್ಲಿ ತುಂಬ ಜನಪ್ರಿಯ ಸಂಸ್ಥೆಯಾಗಿದೆ.

	1894 ರಲ್ಲಿ ಮಾಲ್ಮೋ, ಸ್ವೀಡನ್‍ಗಳಲ್ಲಿ ಹಾನ್ಸ್ ಹರ್‍ಮೋಟ್ ಸ್ಥಳೀಯ ವಿದ್ಯಾರ್ಥಿಗಳಲ್ಲದವರಿಗೆ ಅಂಚೆ ಮೂಲಕ ಶಿಕ್ಷಣ ನೀಡಲಾರಂಭಿಸಿದ. ಅತ್ಯಂತ ಯಶಸ್ವಿಯಾದ ಈ ಶಿಕ್ಷಣ ಸಂಸ್ಥೆ (ಹರ್‍ಮೋಡ್ಸ್ - ಎನ್‍ಕೆಐ ಸೊಲ್ಕಾನ್) ಇಂದು ಯೂರೋಪಿನಲ್ಲಿ ಅತ್ಯಂತ ಜನಪ್ರಿಯ ತೆರಪಿನ ಶಿಕ್ಷಣ ಸಂಸ್ಥೆಯಾಗಿದೆ. 19 ನೆಯ ಶತಮಾನದ ಅಂತ್ಯಭಾಗದಲ್ಲಿ ಆಸ್ಟ್ರೇಲಿಯಾದಲ್ಲಿ ಅಂಚೆ ಶಿಕ್ಷಣ ಆರಂಭವಾಗಿ, ಮೊದಮೊದಲು ಕುಂಟಿತಾದರೂ 1956 ರಲ್ಲಿ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದ ವಿಷಕ್ಷಣಯುತ ವ್ಯವಸ್ಥೆಯಿಂದಾಗಿ ಯಶಸ್ವಿಯಾಯಿತು. ವಿಶಾಲ ಭೂಪ್ರದೇಶವನ್ನು ಹೊಂದಿ, ಚದರಿದ ಜನವಸತಿಯನ್ನು ಪಡೆದಿರುವ ಆಸ್ಟ್ರೇಲಿಯದಲ್ಲಿ ನಿಯತಕಾಲೀನ ಶಾಲಾಕಾಲೇಜುಗಳನ್ನು ಸೇರಿ ವ್ಯಾಸಂಗ ಮಾಡಲು ಸಮರ್ಥರಾದ ಗ್ರಾಮೀಣ ಜನತೆಗೆ ಪ್ರಾಥಮಿಕದಿಂದಾರಂಭಿಸಿ, ವಿಶ್ವವಿದ್ಯಾಲಯದ ಉನ್ನತ ಶಿಕ್ಷಣವನ್ನು ಒದಗಿಸಿಕೊಡುವಲ್ಲಿ ಅಂಚೆ ಶಿಕ್ಷಣ ಯಶಸ್ವಿಯಾಯಿತು.

	19 ನೆಯ ಶತಮಾನದ ಅಂತ್ಯದಲ್ಲಿ ಸೋವಿಯೆತ್ ದೇಶದಲ್ಲಿ ತೆರಪಿನ ಶಿಕ್ಷಣ ಆರಂಭವಾಯಿತು. ಬೋಲ್‍ಷೆವಿಕ್ ಕ್ರಾಂತಿಯ ಅನಂತರ 1917 ರಿಂದ ಪೀಪಲ್ಸ್ ವಿಶ್ವವಿದ್ಯಾಲಯಗಳು ಅಂಚೆ ಮೂಲಕ ಉನ್ನತ ವ್ಯಾಸಂಗಮಾಡಲು ಅವಕಾಶ ಮಾಡಿಕೊಟ್ಟವು. ದೇಶದ ಒಟ್ಟು ವಿದ್ಯಾರ್ಥಿ ಸಂಖ್ಯೆಯಲ್ಲಿ ನೂರಕ್ಕೆ ನಲವತ್ತರಷ್ಟು ಮಂದಿ ಅಂಚೆ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ. ಅಭಿವೃದ್ಧಿಗೊಂಡ ದೇಶಗಳಲ್ಲಿ ಜಪಾನ್ ಅಂಚೆ ಶಿಕ್ಷಣವನ್ನು ತುಂಬ ಪ್ರಯೋಜನಕಾರಿಯಾಗಿ ಉಪಯೋಗಿಸಿಕೊಳ್ಳುತ್ತಿದೆ. ಗಣಿತಶಾಸ್ತ್ರ ಮತ್ತು ವಿಜ್ಞಾನ ವಿಷಯಗಳನ್ನು ದೂರವಾಣಿ, ದೂರದರ್ಶಿನಿ ಹಾಗೂ ಆಕಾಶವಾಣಿಗಳ ಮೂಲಕ ಬೋಧಿಸುವ ವ್ಯವಸ್ಥೆ ಮಾಡಿದೆ. ಅಭಿವೃದ್ಧಿಗೊಳ್ಳುತ್ತಿರುವ ದೇಶಗಳಾದ ಮಲಾವಿ, ಟಾಂಜ್ಯಾನಿಯ, ಜಾಂಬಿಯ ಮತ್ತಿತರ ಪೂರ್ವ ಆಫ್ರಿಕ ದೇಶಗಳು ಇಂಗ್ಲೆಂಡಿನ ಮುಕ್ತವಿಶ್ವವಿದ್ಯಾನಿಲಯದಿಂದ ಬೋಧನ ಸಾಮಗ್ರಿ ಪಡೆದು ತಮ್ಮ ದೇಶದ ಜನರಿಗೆ ಅಂಚೆ ಮೂಲಕ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿವೆ. ಈ ದೇಶಗಳ ಶಿಕ್ಷಣ ಅಬಿವೃದ್ಧಿಗಾಗಿ 1966 ರಲ್ಲಿ ದಾಗ್ ಹ್ಯಾಮರ್‍ಷಿಲ್ಡ್ ಫೌಂಡೇಷನ್ ಸ್ಥಾಪಿತವಾಯಿತು. ವಿಶ್ವವಿಖ್ಯಾತ ಮುಕ್ತ ವಿಶ್ವವಿದ್ಯಾಲಯ (ಓಪನ್ ಯೂನಿವರ್ಸಿಟಿ) ಬ್ರಿಟನ್ನಿನಲ್ಲಿ 1970 ರಲ್ಲಿ ಉದಯವಾಯಿತು.

1964 ರಲ್ಲಿ ಪ್ರಪಂಚಾದ್ಯಂತ ಅಂಚೆ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿ ಸಂಖ್ಯೆಯನ್ನು ಪರಿಗಣನೆಗೆ ತಂದುಕೊಂಡರೆ ಇದರ ಜನಪ್ರಿಯತೆ ಸುಲಭವಾಗಿ ತಿಳಿಯುತ್ತದೆ. 1958 - 59 ಅಮೆರಿಕ 20,00,000, 1959 - 60 ಕೆನಡ 1,23,107, 1959 - 60 ಸೋವಿಯೆತ್ ದೇಶ 9, 25,000, ಪ್ರಾಥಮಿಕ ಮತ್ತು ಕಿರಿಯ ತಾಂತ್ರಿಕ ಶಾಲೆಗಳಲ್ಲಿ 523,000, ಹಿರಿಯ ತಾಂತ್ರಿಕ ಶಾಲೆಗಳಲ್ಲಿ 64,700. 1959 ರಲ್ಲಿ ಉನ್ನತವ್ಯಾಸಂಗ ಮಾಡುತ್ತಿದ್ದ 25 ಲಕ್ಷ ಸೋವಿಯೆತ್ ದೇಶದ ವಿದ್ಯಾರ್ಥಿಗಳಪೈಕಿ 12 ಲಕ್ಷ ಮಂದಿ ಅಂಚೆ ಮೂಲಕ ವ್ಯಾಸಂಗ ಮಾಡುತ್ತಿದ್ದರು. 1961 ಆಸ್ಟ್ರೇಲಿಯಾದಲ್ಲಿ ಶಿಕ್ಷಣಶಾಸ್ತ್ರ ಮತ್ತು ತಾಂತ್ರಿಕ ಶಿಕ್ಷಣದಲ್ಲಿ 25,110 ಜನರೂ ಪ್ರಾಥಮಿಕ ಮತ್ತು ಸೆಕೆಂಡರಿ ತರಗತಿಗಳಲ್ಲಿ 30,000 ಜನರೂ ವ್ಯಾಸಂಗ ಮಾಡುತ್ತಿದ್ದರು. 1958 ರಲ್ಲಿ ಸ್ವೀಡನ್ನಿನಲ್ಲಿ 3,30,000 ಜನರೂ ಶಿಕ್ಷಣ ಪಡೆಯುತ್ತಿದ್ದರು. 1973 ರಲ್ಲಿ ಭಾರತದಲ್ಲಿ 80,000 ಜನ ಅಂಚೆ ಮೂಲಕ ಶಿಕ್ಷಣ ಪಡೆಯುತ್ತಿದ್ದು 1975 ರಲ್ಲಿ ಈ ಸಂಖ್ಯೆ ಒಂದು ಲಕ್ಷಕ್ಕೂ ಮಿಕ್ಕಿದೆ. ಇಂದು ಅಂಚೆ ಶಿಕ್ಷಣ ವಿದ್ಯಾರ್ಥಿಸಂಖ್ಯೆ ದ್ವಿಗುಣ, ತ್ರಿಗುಣಗೊಂಡಿದೆ. ಅಂಚೆ ಶಿಕ್ಷಣ ವ್ಯವಸ್ಥೆ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಗೆ ಪರ್ಯಾಯವಲ್ಲವಾದರೂ ಇಂದು ಇದು ಅತ್ಯಂತ ಜನಪ್ರಿಯ ಶಿಕ್ಷಣ ವ್ಯವಸ್ಥೆ ಎಂಬುದರಲ್ಲಿ ಸಂಶಯವಿಲ್ಲ.

	ತೆರವು ಶಿಕ್ಷಣದ ಉಪಯುಕ್ತತೆ ಮತ್ತು ದೌರ್ಬಕ್ಕೆ : ಇದೊಂದು ವಿಶಿಷ್ಟ ಪದ್ಧತಿ: ಸಂದರ್ಭಕ್ಕನುಗುಣವಾಗಿ ಹೊಂದಿಕೊಳ್ಳುವ ಸಾಮಥ್ರ್ಯ ಹೊಂದಿರುವಂಥೆದು. ಕಾಲ, ದೇಶ, ನಿಯತ ಹಾಜರಿಯ ಕಟ್ಟುಪಾಡಿಲ್ಲದೆ ನಡೆಸಲನುಕೂಲವಾದುದು. ಪ್ರಾಥಮಿಕದಿಂದ ಸ್ನಾತಕೋತ್ತರದ ವರೆಗೆ ಯಾವುದೇ ಶಿಕ್ಷಣವನ್ನಾದರೂ ಈ ಪದ್ಧತಿಯಲ್ಲಿ ಬೋಧಿಸುವುದು ಸಾಧ್ಯ. ಅಲ್ಪವೆಚ್ಚ ಈ ಶಿಕ್ಷಣದ ಸೂಜಿಗಲ್ಲು, ಅಂಚೆ ಶಿಕ್ಷಣವನ್ನು ಪ್ರತ್ಯೇಕ ಸಂಸ್ಥೆ ಸ್ಥಾಪಿಸಿಯೂ ಶಾಲಾಕಾಲೇಜುಗಳ ಪೂರಕ ಸಂಸ್ಥೆಗಳಾಗಿ ಸ್ಥಾಪಿಸಿಯೂ ನಡೆಸಬಹುದು. ಈ ಶಿಕ್ಷಣ ಕ್ರಮದಲ್ಲಿ ಕೆಲವು ದೌರ್ಬಲ್ಯಗಳೂ ಉಂಟು ನಿಯತಕಾಲಿಕ ಶಾಲಾಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಒಂದೆಡು ಸೇರಿ, ವಾಸಿಸಿ, ಅಡಿ ಗಳಿಸುವ ಉತ್ತಮ ನಡೆನುಡಿ, ಮುಂದಾಳುತನ, ಕಲೆ, ಕ್ರೀಡೆ ವಾಚಾಳತೆ, ಸಾಮೂಹಿಕ ವಿಚಾರವಿಯಮ-ಇವು ತೆರಪಿನ ವಿದ್ಯಾರ್ಥಿಗೆ ಲಭ್ಯವಾಗದ ಅನುಭವಗಳು, ಇವುಗಳಲ್ಲಿ ಕೆಲವು ಕೊರತೆಗಳನ್ನಾದರೂ ತುಂಬಿ ಕೊಡುವುದು ಇಂದು ಸಾಧ್ಯವಾಗಿದೆ.

	ತೆರಪಿನ ಶಿಕ್ಷಣದಿಂದ ಕಡಿಮೆ ಖರ್ಚಿನಲ್ಲಿ ಬಹುಸಂಖ್ಯಾತಿಗೆ ಶಿಕ್ಷಣ ನೀಡಲು ಸಾಧ್ಯವಿರುವುದರಿಂದ, ಅಭಿವ್ಧದ್ಧಿಗೊಳ್ಳುತ್ತಿರುವ ದೇಶಗಳ ಆರ್ಥಿಕ ಸ್ಥಿತಿಗೆ ಹೊಂದಿಕೊಳ್ಳುವುದರಿಂದ ಬಹುಸಂಖ್ಯಾತ ಅನಕ್ಷರಸ್ಥರಿಂದ ದೇಶದ ಜನತೆಗೆ ಅಲ್ಪಕಾಲದಲ್ಲಿ ಶಿಕ್ಷಣ ನೀಡಲು ಸಮರ್ಥವಾಗಿರುವುದರಿಂದ ಸ್ವಾಗತಾರ್ಹವಾದುದು. ಆರಂಭದಲ್ಲಿ ಈ ಶಿಕ್ಷಣ ಪದ್ಧತಿ ಜನತೆಗೆ ವಿದ್ಯಾವಂತವರ್ಗ ತೋರುವ ಅನುಕಂಪೆಯ ರೂಪದಲ್ಲಿ ಉದಿಸಿತು. ಅದರಿಂದ ಸಮಾಜದ ಋಣದಿಂದ ವಿದ್ಯಾವಂತರಾಗಿ ಮೇಲಿರುವ ಈ ವರ್ಗ ಋಣ ತೀರಸಲಾದರೂ ಬಯಸಿ ಬಂದವರಿತೆಲ್ಲಾ ಶಿಕ್ಷಣ ನೀಡಲು ಮುಂದಾರುವುದು ಅವರ ಧರ್ಮವಾಗಿದೆ. ಕರ್ತವ್ಯವಾಗಿದೆ. ಐ.ಸಿ.ಸಿ.ಇ.ಯ ಬೆಳವಣಿಗೆ ಹಾಗೂ ಯುನೆಸ್ಕೂ ಸಂಸ್ಥೆಯ ತೀವ್ರಾಸಕ್ತಿಯ ಕಾರಣದಿಂದಾಗಿ ಮುಂಬರುವ ವರ್ಷಗಳಲ್ಲಿ ತೆರಪಿನ ಶಿಕ್ಷಣ ಪ್ರಮುಖ ಮಾಧ್ಯಮವಾಗಲಿದೆ. ಆಕಾಶವಾಣಿ, ದೂರವಾಣಿ, ದೂರದರ್ಶಿನಿ ಹಾಗೂ ಜೆಟ್ ವಿಮಾನಗಳಲ್ಲಿ ಪಾಠ ರವಾನೆ ಈಗಾಗಲೇ ಆರಂಭವಾಗಿ ಈ ಶಿಕ್ಷಣ ಜಗತ್ ವ್ಯಾಪ್ತಿಯಾಗಿದೆ : ತ್ವರಿತಗತಿಯಲ್ಲಿ ಮುನ್ನಡೆ ಸಾಧಿಸುತ್ತಿದೆ. ಕಾಲದೂರಗಳನ್ನು ಇಲ್ಲವಾಗಿಸಿದೆ. ಸ್ಯಾಟಲೈಟ್‍ಗಳ ಮೂಲಕ ಪಾಠ ಬಿತ್ತರವಾಗುವ ಸಮಯ ಸನ್ನಿಹಿತವಾಗುತ್ತಿದೆ.					(ಕೆ.ಎಸ್.ವಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ